ಕಾಂತಾರ ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಅದೇ ಹುರುಪಿನಲ್ಲಿ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಮಾಡಲು ಮುಂದಾದರು. ಕಾಂತಾರ ಚಾಪ್ಟರ್ 1 ಕದಂಬರ ಕಾಲದಲ್ಲಿ ನಡೆಯುವ ಕಥೆಯಾಗಿದೆ. ಒಂದು ಕಡೆಯಲ್ಲಿ, ಕಾಡಿನಲ್ಲಿ ವಾಸಿಸುವ ಜನಾಂಗ, ಮತ್ತೊಂದು ಕಡೆ ಶ್ರೀಮಂತಿಕೆಯ ರಾಜಾಡಳಿತ ಎಂಬಂತೆ ಚಿತ್ರ ಕಟ್ಟಿಕೊಟ್ಟಿದೆ. ರಾಜನಿಗೆ ಕಾಡಿನ ಮೇಲೆ ಕಣ್ಣು, ಕಾಡಿನವರಿಗೆ ರಾಜ್ಯದ ಮೇಲೆ ಕಣ್ಣು. ಹೀಗೆ ಪರಸ್ಪರ ಆಸೆ ಹುಟ್ಟಿಕೊಳ್ಳಲು ಕಾರಣ ಏನು? ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾದಲ್ಲಿ ಪಂಜುರ್ಲಿ ದೈವವನ್ನು ಹೈಲೈಟ್ ಮಾಡಿದ್ದಾರೆ. ಇದರ ಜೊತೆಗೆ ಇತರೆ ದೈವಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ರಿಷಬ್ ಶೆಟ್ಟಿ ಅವರು ಬೆರ್ಮೆ ಎಂಬ ಹೆಸರಿನೊಂದಿಗೆ ಕಾಣಿಸಿಕೊಂಡಿದ್ದಾರೆ. ’ಕಾಂತಾರ’ (೧ಕಾಡು) ಕಾಯುವ ನಾಯಕನ ಪಾತ್ರದಲ್ಲಿ ಕಂಗೊಳಿಸಿದ್ದಾರೆ.ದೈವದ ಪಾತ್ರ ಮಾಡುವಾಗ ಸಖತ್ ಎನರ್ಜಿಯಲ್ಲಿ ನಟಿಸಿದ್ದು, ನೋಡುಗರಿಗೆ ದೈವವೇ ಬಂದಿರ ಬಹುದೇ ಎಂಬ ಪ್ರಶ್ನೆ ಮಾಡುವುದಂತೂ ಖಂಡಿತ.
ರಾಜಕುಮಾರಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಅವರ ಪ್ರತಿ ಲುಕ್ ಪರ್ಫೆಕ್ಟ್ ಫ್ರೇಮ್ ನಲ್ಲಿ ಸೆರೆಹಿಡಿದಿದ್ದು, ಯುವ ರಾಣಿಯ ಪಾತ್ರಕ್ಕೆ ಅವರಿಗಿಂತ ಹೆಚ್ಚು ಸೂಕ್ತ ಮತ್ತೊಬ್ಬರು ಇರಲಿಕ್ಕಿಲ್ಲ ಎಂದನಿಸಬಹುದು. ರಾಜರ ಕಾಲದ ಉಡುಗೆಯು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಬುದ್ಧ ನಟನೆಯ ಮೂಲಕ ಅವರು ಇಷ್ಟ ಆಗುತ್ತಾರೆ. ಗುಲ್ಶನ್ ದೇವಯ್ಯ ಮಾಡಿದ ಕುಲಶೇಖರ ಪಾತ್ರಕ್ಕೆ ಇನ್ನೂ ಗಟ್ಟಿತನ ಕೊಡಬಹುದಿತ್ತು ಎಂದನಿಸುತ್ತದೆ. ಜಯರಾಮ್, ಪ್ರಮೋದ್ ಶೆಟ್ಟಿ ಮೊದಲಾವರು ತಮಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಗುವಿನ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ರಾಕೇಶ್ ಪೂಜಾರಿ ಪಾತ್ರವೂ ಹೈಲೈಟ್ ಆಗಿದೆ. ಅವರು ಬದುಕಿದ್ದಿದ್ದರೆ ಖುಷಿ ಪಡುತ್ತಿದ್ದರೇನೋ.

ಅದ್ಬುತ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ನಂತರ ನಿಧಾನವಾಗಿ ಟೇಕ್ಆಫ್ ಆಗುತ್ತದೆ. ಇಂಟರವಲ್ ಬ್ಲಾಕ್ ಗು ಮೊದಲು ಬರುವ ಫೈಟಿಂಗ್ ಕ್ಲೈಮ್ಯಾಕ್ಸ್ ರೀತಿಯ ಫೀಲ್ ಕೊಡುತ್ತದೆ. ಇದರ ಫೈಟ್ ಸಂಯೋಜನೆ ಭಿನ್ನವಾಗಿದೆ. ರಿಷಬ್ ಕ್ಲೈಮ್ಯಾಕ್ಸ್ನ ಒಳ್ಳೆಯ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಥಿಯೇಟರ್ ನಿಂದ ಹೊರ ಬರುವಾಗ ಒಳ್ಳೆಯ ಫೀಲ್ ಕೊಡುವುದಂತೂ ಸತ್ಯ. ಸಿನಿಮಾದಲ್ಲಿ ಅದ್ದೂರಿತನಕ್ಕೆ ಎಲ್ಲಿಯೂ ಕೊರತೆ ಆಗದಂತೆ ‘ಹೊಂಬಾಳೆ ಫಿಲ್ಮ್ಸ್’ ಪ್ರೊಡಕ್ಷನ್ ನೋಡಿಕೊಂಡಿದೆ.
ವಿ ಎಫ್ ಎಕ್ಸ್ ಸಿನಿಮಾದಲ್ಲಿ ಅತೀ ಹೆಚ್ಚಾಗಿ ಕಾಣಬಹುದು. ಇಡೀ ಚಿತ್ರದಲ್ಲಿ ವಿ ಎಫ್ ಎಕ್ಸ್ ಬಹು ದೊಡ್ಡ ಪಾತ್ರ ವಹಿಸಿದೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪ್ರಾಚೀನ ಕಾಲಕ್ಕೆ ತಕ್ಕಂತೆ ಕಾಸ್ಟ್ಯೂಮ್ ಬಳಕೆ ಮಾಡಲಾಗಿದೆ. ಮ್ಯೂಸಿಕ್ ವಿಷಯಕ್ಕೆ ಬಂದರೆ ಅಜನೀಶ್ ‘ಕಾಂತಾರ’ ಸಿನಿಮಾದ ಎರಡು ಹಾಡುಗಳನ್ನೇ ಇಲ್ಲಿಯೂ ಬಳಕೆ ಮಾಡಿಕೊಂಡಿದ್ದು, ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡುತ್ತದೆ.

ಕಾಂತಾರ’ ಸಿನಿಮಾದಲ್ಲಿ ಎಲ್ಲವೂ ಎಷ್ಟಕ್ಕೆ ಬೇಕೋ ಅಷ್ಟೇ ಇದ್ದವು. ಈ ಕಾರಣದಿಂದಲೇ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ, ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ಫೈಟ್ ಗಳೇ ಹೆಚ್ಚು ಅಬ್ಬರಿಸಿದಂತಿದೆ. ಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯ ಬಹುದಿತ್ತು. ಸಂಪೂರ್ಣ ಚಿತ್ರದಲ್ಲಿ ಬರುವ ಯುದ್ಧದ ದೃಶ್ಯ ರಾಜಮೌಳಿಯ ‘ಬಾಹುಬಲಿ’ ಸಿನಿಮಾನ ನೆನಪಿಸುತ್ತದೆ. ‘ನಮ್ಮ ಊರಿನಿಂದ ಕಾಡಿಗೆ ನಡೆದು ಹೋದರೆ ಒಂದು ದಿನ ಬೇಕು’ ಎಂದು ಆರಂಭದಲ್ಲಿ ಡೈಲಾಗ್ ಒಂದು ಬರುತ್ತದೆ. ಆದರೆ, ಕ್ಲೈಮ್ಯಾಕ್ಸ್ ವೇಳೆಗೆ ಕಥಾ ನಾಯಕ ಕ್ಷಣಾರ್ಧದಲ್ಲಿ, ನಾಡಿನಿಂದ ಕಾಡಿಗೆ ತೆರಳುತ್ತಾನೆ. ಈ ರೀತಿ ಕೆಲವು ದೃಶ್ಯಗಳು ಲಾಜಿಕ್ ಕೇಳುತ್ತವೆ. ‘ಕಾಂತಾರ’ದ ಸಕ್ಸಸ್ ಸೂತ್ರವನ್ನೇ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೂ ಬಳಸಿದ್ದಾರೆ ರಿಷಬ್. ಬೇಡ ಬೇಡವೆಂದರೂ ‘ಕಾಂತಾರ’ ಹಾಗೂ ‘ಕಾಂತಾರ ಚಾಪ್ಟರ್ 1’ ನಡುವಿನ ಹೋಲಿಕೆ ನಡೆಯುತ್ತಲೇ ಇರುತ್ತದೆ. ‘ಕಾಂತಾರ: ಚಾಪ್ಟರ್ 2’ ಬರುವ ಸೂಚನೆಯನ್ನೂ ಕ್ಲೈಮ್ಯಾಕ್ಸ್ನಲ್ಲಿ ನೀಡಲಾಗಿದೆ.