ಆನೇಕಲ್: ಬಾವನೇ ಬಾಮೈದನನ್ನು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ರಂಜಿತ್ (24)ನ ಕೊಲೆಯಾದ ವ್ಯಕ್ತಿ. ಶ್ರೀನಿವಾಸ್ ಎಂಬಾತ ಕೊಲೆ ಮಾಡಿದಲ್ಲದೇ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ರಂಜಿತ್ನ ಸ್ವಂತ ಅಕ್ಕ ಪವಿತ್ರರನ್ನು ಶ್ರೀನಿವಾಸ್ ಮದುವೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ತಂಗಿ ಕೋಮಲ್ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್ನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗಂಡನನ್ನ ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.
ಶ್ರೀನಿವಾಸ್ ರಂಜಿತ್ನ ಕರೆದು ವಾರ್ನಿಂಗ್ ಕೂಡ ಮಾಡಿದ್ದ. ಇದೆಲ್ಲದರಿಂದ ಕೋಪಗೊಂಡ ಶ್ರೀನಿವಾಸ್ ರಂಜಿತ್ ಮೇಲೆ ಸೇಡು ಬೆಳೆಸಿಕೊಂಡಿದ್ದ. ನಿನ್ನೆ ಗುರುವಾರ ಸಂಜೆ ವೇಳೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ರಂಜಿತ್ನನ್ನು ಕರೆತಂದಿದ್ದ ಶ್ರೀನಿವಾಸ್ ಕೊಲೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರಿಂದ ಆರೋಪಿ ಶ್ರೀನಿವಾಸನನ್ನು ವಶಕ್ಕೆ ಪಡೆಯಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಮಾಹಿತಿ ನೀಡಿದ್ದು, ಸೋಕೋ ಟೀಮ್ನಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮೃತದೇಹದ ಜೊತೆ ಕಬ್ಬಿಣದ ರಾಡ್ ಪತ್ತೆ ಆಗಿದೆ ಎಂದು ತಿಳಿಸಿದ್ದಾರೆ.
ಕೊಲೆ ಬಳಿಕ ಮೃತದೇಹ ಕಾರಿನ ಡಿಕ್ಕಿಗೆ ಹಾಕಲಾಗಿದೆ. ರಂಜಿತ್ನ ಕೊಲೆ ಮಾಡಿದ ಶ್ರೀನಿವಾಸ್ ನೇರವಾಗಿ ಬನ್ನೇರುಘಟ್ಟ ಠಾಣೆಗೆ ಬಂದಿದ್ದಾನೆ ಎಂದು ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಮಾಹಿತಿ ನೀಡಿದ್ದಾರೆ. ಈ ಘಟನಾ ಸಂಬಂಧ ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪತ್ನಿಯ ಕತ್ತು ಕೊಯ್ದು, ಶವದ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದ ಪಾಪಿ ಪತಿ


















