ವೈಕುಂಠ ಏಕಾದಶಿ!! ಏಳೇಳು ಜನ್ಮದ ಪಾಪಗಳನ್ನು ತೊಳೆದು, ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ. ವೈಕುಂಠದ ಬಾಗಿಲು ತೆರೆಯುವ ಅಪೂರ್ವ ದಿನ. ಬಹುತೇಕರು ಈ ದಿನ ಉಪವಾಸವಿದ್ದು, ಮಹಾ ವಿಷ್ಣುವಿನ ದರ್ಶನ ಪಡೆಯುತ್ತಾರೆ. ವೈಕುಂಠ ಏಕಾದಶಿ ತಿಥಿಯು ಜನವರಿ 9ರಂದು ಮಧ್ಯಾಹ್ನ 12.22 ಕ್ಕೆ ಆರಂಭವಾಗಿ ಜನವರಿ 10 ರಂದು ಬೆಳಗ್ಗೆ 10.19 ಕ್ಕೆ ಮುಗಿಯುತ್ತದೆ.
ಏಕಾದಶಿ ಎಂದರೆ 11 ಎಂದರ್ಥ. ಪ್ರತಿ ಮಾಸದ ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷದ ಹನ್ನೊಂದನೇ ದಿನವನ್ನು ಏಕಾದಶಿ ಎಂದು ಕರೆಯಲಾಗುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುತ್ತಾನೆ. ಹೀಗೆ ಪ್ರವೇಶ ಮಾಡುವ ಮುನ್ನ ಬರುವ ಏಕಾದಶಿಯನ್ನೇ ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ.
ವೈಕುಂಠ ಏಕಾದಶಿ ಮುಕ್ಕೋಟಿ ಏಕಾದಶಿ ಎಂತಲೂ ಕರೆಯುತ್ತಾರೆ. ಈ ದಿನ ವಿಷ್ಣು ದೇವರು ಗರುಡ ವಾಹನರೂಢರಾಗಿ ವೈಕುಂಠದಲ್ಲಿ ಉತ್ತರ ದ್ವಾರದ ಕಡೆ ಬಂದಾಗ ಸಕಲ ದೇವಾನುದೇವತೆಗಳು ಮಹಾವಿಷ್ಣು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಮುಕ್ಕೋಟಿ ದೇವರು ಎಲ್ಲರೂ ಸೇರಿ ಮಹಾವಿಷ್ಣುವಿನ ದರ್ಶನ ಪಡೆಯುವ ವಿಶೇಷ ದಿನವೇ ವೈಕುಂಠ ಏಕಾದಶಿ. ಮುಕ್ಕೋಟಿ ದೇವತೆಗಳಿಗೆ ಉತ್ತರ ದಿಕ್ಕಿನಲ್ಲಿ ವಿಷ್ಣು (vistnu)ದರ್ಶನ ನೀಡಿದ್ದರಿಂದ, ಈ ದಿನ ವಿಷ್ಣು ದೇವಸ್ಥಾನಗಳಲ್ಲಿ ಉತ್ತರಕ್ಕೆ ಇರುವ ಬಾಗಿಲನ್ನು ತೆರೆಯುತ್ತಾರೆ. ಇದುವೇ ವೈಕುಂಠ ಬಾಗಿಲು. ಈ ಬಾಗಿಲು ಮೂಲಕ ಹೋಗಿ ವಿಷ್ಣುವಿನ ದರ್ಶನ ಪಡೆದರೆ ಏಳು ಜನ್ಮಗಳ ಪಾಪಗಳು ಹೋಗಿ, ಮೋಕ್ಷ ದೊರೆಯುತ್ತದೆ ಎನ್ನುವುದು ಭಕ್ತರ ನಂಬಿಕೆ.
ಸಾಮಾನ್ಯ ದಿನಗಳಲ್ಲಿ ದೇವಸ್ಥಾನದ(temple) ಉತ್ತರ ದಿಕ್ಕಿನಲ್ಲಿರುವ ಬಾಗಿಲನ್ನು ಮುಚ್ಚಿರುತ್ತಾರೆ. ವೈಕುಂಠ ದ್ವಾರದ ಮೂಲಕ ಹೋಗುವಾಗ ತಲೆ ಬಾಗಿ ನಡೆಯಬೇಕು. ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದು ಬಹಳ ಶ್ರೇಷ್ಠ. ವೈಕುಂಠ ಏಕಾದಶಿಯಮ್ದು ವಿಷ್ಣುವಿಗೆ ತುಳಸಿ ಅರ್ಚನೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾರೆ.