ಮುಂಬೈ: ದೇಶದಲ್ಲೇ ನಂಬರ್ ಒನ್ ಶ್ರೀಮಂತ ಎನಿಸಿರುವ ಮುಕೇಶ್ ಅಂಬಾನಿ (Mukesh Ambani) ಅವರು ಮುಂಬೈನಲ್ಲಿರುವ ಐಷಾರಾಮಿ “ಆಂಟಿಲಿಯಾ” (Antilia) ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಸುಮಾರು 27 ಅಂತಸ್ತಿನ ಬಂಗಲೆಯಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಸೇರಿ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಈ ಐಷಾರಾಮಿ ಮನೆಯ ಒಂದು ತಿಂಗಳ ವಿದ್ಯುತ್ ಬಿಲ್ ಎಷ್ಟು ಎಂಬ ಸಂಗತಿ ಈಗ ಬಹಿರಂಗವಾಗಿದೆ. ಮುಕೇಶ್ ಅಂಬಾನಿ ಮನೆಯ ಒಂದು ತಿಂಗಳ ವಿದ್ಯುತ್ ಬಿಲ್ 70.69 ಲಕ್ಷ ರೂ. ಎಂದು ತಿಳಿದುಬಂದಿದೆ.
ಹೌದು, ಮುಕೇಶ್ ಅಂಬಾನಿ ಅವರ ಮನೆಯ ಮಾಸಿಕ ವಿದ್ಯುತ್ ಬಿಲ್ 70 ಲಕ್ಷ ರೂ. ಎಂದು ವರದಿಗಳು ತಿಳಿಸಿವೆ. ಅಷ್ಟಕ್ಕೂ ಇದು ಕಳೆದ ಮಾರ್ಚ್ ತಿಂಗಳ ಬಿಲ್ ಅಲ್ಲ. 2010ರಲ್ಲಿ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಆಂಟಿಲಿಯಾ ನಿವಾಸಕ್ಕೆ ತೆರಳಿದ ಮೊದಲ ತಿಂಗಳ ವಿದ್ಯುತ್ ಬಿಲ್ ಇದು. ಆಗ ಒಂದು ತಿಂಗಳಲ್ಲಿ 6,37,240 ಯೂನಿಟ್ಸ್ ವಿದ್ಯುತ್ ಬಳಸಲಾಗಿತ್ತು. ಈಗ ಎಷ್ಟು ಬಿಲ್ ಬರುತ್ತಿದೆ ಎಂಬುದು ಲಭ್ಯವಾಗಿಲ್ಲ.
2010ರಲ್ಲಿ ಮುಂಬೈನಲ್ಲಿರುವ 27 ಅಂತಸ್ತಿನ ಬಂಗಲೆಯಾದ ಆಂಟಿಲಿಯಾವನ್ನು ಸರಿಸುಮಾರು 15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ 27 ಅಂತಸ್ತಿನ ಭವ್ಯ ಬಂಗಲೆ ನಿರ್ಮಾಣಕ್ಕೆ ಸರಿಸುಮಾರು 6 ವರ್ಷಗಳು ತೆಗೆದುಕೊಂಡಿದ್ದು, ಈ ಭವ್ಯ ಬಂಗಲೆಯಲ್ಲಿ ಆಧುನಿಕ ಸೌಲಭ್ಯಗಳಿಗೆ ಯಾವುದೇ ಕೊರತೆಯಿಲ್ಲ.
ಸುಮಾರು ಐವತ್ತು ಆಸನಗಳ ಥಿಯೇಟರ್, ಟರೇಸ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್, ಮೂರು ಹೆಲಿಪ್ಯಾಡ್ಗಳು, ಟೆರೇಸ್ ಗಾರ್ಡನ್, ಐಷಾರಾಮಿ ಸ್ಪಾ, ಒಂಬತ್ತು ಹೈ-ಸ್ಪೀಡ್ ಎಲಿವೇಟರ್ಗಳು, ವಿದ್ಯುತ್ ದೀಪಗಳು, ಆರೋಗ್ಯ ಕೇಂದ್ರ ಹಾಗೂ ಸುಂದರವಾದ ದೇವಾಲಯ ಸೇರಿದಂತೆ ಇನ್ನಿತ್ತರ ಹತ್ತು ಹಲವು ಐಷಾರಾಮಿ ಸೌಲಭ್ಯಗಳನ್ನು ಕಾಣಬಹುದು. ಅಷ್ಟೇ ಅಲ್ಲದೇ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದ್ದು, ಇಲ್ಲಿ 160 ಕ್ಕೂ ಹೆಚ್ಚು ಕಾರ್ ಪಾರ್ಕ್ ಮಾಡಬಹುದಾಗಿದೆ. ಅಂದಹಾಗೆ, ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ 7.89 ಲಕ್ಷ ಕೋಟಿ ರೂಪಾಯಿ.