ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ನಟ ದರ್ಶನ್ ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದಕ್ಕೆ, ಈ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.
ಹೀಗಾಗಿ ಪೊಲೀಸರು ಸೂಕ್ಷ್ಮತೆಯಿಂದ ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಈಗ ತನಿಖೆ ಅಂತಿಮ ಹಂತ ತಲುಪಿದ್ದು, ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಿನವಾರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಈ ಪ್ರಕರಣದ ತನಿಖೆಗೆ ಇಲ್ಲಿಯವರೆಗೆ 5. ಲಕ್ಷ ರೂ. ಖರ್ಚು ತಲುಪಿದೆ ಎನ್ನಲಾಗಿದೆ.
ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ ಕೆಲವು ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚಾಗಿದೆ ಎಂದು ತಿಳಿದು ಬಂದಿದೆ. ಟ್ರಾನ್ಸ್ಪೋರ್ಟ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಪೇಪರ್, ಕಾರ್ಡ್ ರೀಡರ್, ಆರೋಪಿಗಳಿಗೆ ಊಟ, ತಿಂಡಿ, ಎಫ್ ಎಸ್ ಎಲ್ ಸೇರಿದಂತೆ 5 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಖರ್ಚು ವೆಚ್ಚವನ್ನು ಕೂಡ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರದಲ್ಲಿದ್ದ ಸಂದರ್ಭದಲ್ಲಿ ನಟ ದರ್ಶನ್ ರೌಡಿಶೀಟರ್ ಗಳ ಜೊತೆ ಇದ್ದ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದವು. ಹೀಗಾಗಿ ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪ ಕೇಳಿ ಬಂದಿತ್ತು. ಇದು ಕೂಡ ದರ್ಶನ್ ಗೆ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆ ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಪರ ವಕೀಲರು ಮುಂದಾಗಲಿದ್ದಾರೆ. ಆದರೆ, ರೌಡಿಶೀಟರ್ಗಳ ಜತೆ ದರ್ಶನ್ ಗುರುತಿಸಿಕೊಂಡಿದ್ದ ಫೋಟೋ ಮತ್ತು ವಿಡಿಯೋ ಮುಂದಿಟ್ಟುಕೊಂಡು ಪೊಲೀಸರು ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇದು ದರ್ಶನ್ ಬೇಲ್ ಗೆ ಕಂಟಕವಾಗಬಹುದು ಎನ್ನಲಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಮೂರು ಬ್ಯಾಗ್ ಸಮೇತ ವಕೀಲರೊಂದಿಗೆ ಶನಿವಾರ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಬಟ್ಟೆ, ಇನ್ನು ಎರಡು ಬ್ಯಾಗ್ ಗಳಲ್ಲಿ ಡ್ರೈ ಫ್ರೂಟ್ಸ್, ಬಿಸ್ಕತ್ ಸೇರಿದಂತೆ ವಿವಿಧ ತಿಂಡಿಗಳನ್ನು ತೆಗೆದುಕೊಂಡು ಹೋಗಿದ್ದರು. ಜೈಲಿನಲ್ಲಿ ದರ್ಶನ್ ನೋಡಿ ವಿಜಯಲಕ್ಷ್ಮೀ ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ.
ಇದೇ ಪ್ರಕರಣದಲ್ಲಿ ಎ1 ಪವಿತ್ರಾಗೌಡ ಮತ್ತು ಮತ್ತೋರ್ವ ಆರೋಪಿ ಅನುಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 57ನೇ ಸಿಸಿಎಚ್ ಕೋರ್ಟ್ ವಜಾಗೊಳಿಸಿದೆ.