ಇತ್ತೀಚೆಗೆ ನಂದಿನಿ ಬ್ರ್ಯಾಂಡ್ ಗೆ ಇನ್ನಿಲ್ಲದ ಹೆಸರು ಬಂದಿದೆ. ನಂದಿನಿಯ ಉತ್ಪನ್ನಗಳಿಗೆ ಜನರು ಮನಸೋಲುತ್ತಿದ್ದಾರೆ. ಹೀಗಾಗಿ ನಂದಿನಿ ಉಪ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈಗಷ್ಟೇ ಬಿಡುಗಡೆಯಾಗಿರುವ ನಂದಿನಿ ಇಡ್ಲಿ ಹಿಟ್ಟು ಹಾಗೂ ದೋಸೆ ಹಿಟ್ಟು ಕೇವಲ ಮೂರೇ ದಿನಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿರುವುದು ಕೂಡ ಇದಕ್ಕೆ ಸಾಕ್ಷಿ ಎನ್ನುವಂತಾಗಿದೆ.
ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಗ್ರಾಹಕರು ಖುಷಿಯಿಂದ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಹೀಗಾಗಿ ಕೇವಲ ಮೂರೇ ದಿನಗಳಲ್ಲಿ 2.250 ಮೆಟ್ರಿಕ್ ಟನ್ ಇಡ್ಲಿ ಹಾಗೂ ದೋಸೆ ಹಿಟ್ಟು ಮಾರಾಟವಾಗಿದೆ.
ಇತ್ತೀಚೆಗಷ್ಟೇ ಕೆಎಂಎಫ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಪರಿಚಯಿಸಿತ್ತು. ಸಿಎಂ ಸಿದ್ದರಾಮಯ್ಯ ಕಳೆದ ಬುಧವಾರ ಈ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಈಗ ಉತ್ಪನ್ನಗಳ ಮಾರಾಟ ಆರಂಭವಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೆಎಂಎಫ್ ‘ರೆಡಿ ಟು ಕುಕ್’ ಪರಿಕಲ್ಪನೆಯಡಿ ನಂದಿನಿ ಬ್ರ್ಯಾಂಡ್‌ನ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಲಿನ ಉಪ ಉತ್ಪನ್ನ ‘ವೇ ಪೌಡರ್’ ಮತ್ತು ಗೋಧಿ ಬೆರೆಸಿ ತಯಾರಿಸಲಾಗುವ ಈ ಹಿಟ್ಟಿನಲ್ಲಿ ಪ್ರೊಟೀನ್ ನ ಪ್ರಮಾಣ ಹೆಚ್ಚಾಗಿದ್ದು, ಇದು ಶುದ್ಧ ಸಸ್ಯಾಹಾರಿ ಉತ್ಪನ್ನವಾಗಿದೆ.
ಬೆಂಗಳೂರು ನಗರದಲ್ಲಿ ಎರಡು ವಿವಿಧ ಪ್ಯಾಕ್ ಗಳಲ್ಲಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರಾಟ ಮಾಡಲಾಗುತ್ತಿದೆ. 450 ಗ್ರಾಮ್ ಪ್ಯಾಕೆಟ್ ಗೆ 40 ರೂ. ಹಾಗೂ 900 ಗ್ರಾಮ್ ಪ್ಯಾಕೆಟ್ ಗೆ 80 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಗ್ರಾಹಕರು ಹೆಚ್ಚು ಖುಷಿಯಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.