ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಲಂಚ ನೀಡಲೇಬೇಕಂತೆ ಇಲ್ಲವಾದರೆ, ಮನೆಗೆ ಕರೆಂಟ್ ಸಿಗುವುದಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಕೆಇಆರ್ ಸಿ ನಿಯಮದಂತೆ ಅರ್ಜಿ ಕೊಟ್ಟ 3 ದಿನಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ನೀಡಬೇಕು. ಆದರೆ, ಬೆಸ್ಕಾಂ ನಲ್ಲಿ ಅಧಿಕಾರಿಗಳಿಗೆ ಲಂಚ ನೀಡದಿದ್ದರೆ, ಈ ನಿಯಮವೂ ನಡೆಯುವುದಿಲ್ಲವಂತೆ. ಲಂಚ ನೀಡಿದರೆ ಮಾತ್ರ ಸಂಪರ್ಕ ಸಿಗುತ್ತದೆ. ಇಲ್ಲವಾದರೆ ವರ್ಷವಾದರೂ ಸಿಗುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈಗ ದಾಖಲೆ ಸಮೇತ ಗ್ರಾಹಕರೊಬ್ಬರು ಬೆಸ್ಕಾಂ ಇಂಜಿನಿಯರ್ ಗಳ ಭ್ರಷ್ಟಾಚಾರ ಬಟಾಬಯಲು ಮಾಡಿದ್ದಾರೆ. ಹೊಸ ವಿದ್ಯುತ್ ಸಂಪರ್ಕ ನೀಡುವುದಕ್ಕಾಗಿ ಬೆಸ್ಕಾಂ ಅಧಿಕಾರಿಗಳಿಗೆ 30 ಸಾವಿರ ರೂ. ಲಂಚ ಬೇಡವಂತೆ. ಬರೋಬ್ಬರಿ 1 ಲಕ್ಷ ರೂ. ಬೇಕಂತೆ. ನರಸಾಪುರ ಬೆಸ್ಕಾಂ ಕಚೇರಿಯಲ್ಲಿ ಇಇ, ಜೆಇ ಅಧಿಕಾರಿಗಳ ಈ ಲಂಚಾವತಾರ ಬಟಾಬಯಲಾಗಿದೆ. ಅಧಿಕಾರಿಗಳಿಗೆ 30 ಸಾವಿರ ರೂ. ಲಂಚ ನೀಡಿ 8 ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಬದಲಾಗಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬೆಸ್ಕಾಂ ಇಇ ಶುಭಾ ಮತ್ತು ಜೆಇ ಅಲಿ ಪಾಷಾ ಎಂಬುವವರ ಭ್ರಷ್ಟಾಚಾರವನ್ನು ದಾಖಲೆ ಸಮೇತ ಗ್ರಾಹಕರು ಬಯಲು ಮಾಡಿದ್ದಾರೆ. ಈ ಕುರಿತು ಬೆಸ್ಕಾಂ ಎಂಡಿ ಶಿವಶಂಕರ್ ಗೆ ದೂರು ನೀಡಿದ್ದಾರೆ. ಅಲ್ಲದೇ, ನೋಟಿಸ್ ನ್ನು ಕೂಡ ಗ್ರಾಹಕ ಕಳುಹಿಸಿದ್ದಾರೆ.