ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೇವೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರವು ಪಿಎಂ ಜನಧನ್ ಯೋಜನೆ ಜಾರಿಗೆ ತಂದಿದೆ. ಯೋಜನೆಗೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ದೇಶದಲ್ಲಿ 55 ಕೋಟಿಗೂ ಅಧಿಕ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆದರೆ, ಕಳೆದ 10 ವರ್ಷಗಳಿಂದ ಬ್ಯಾಂಕ್ ಖಾತೆಗಳಿಗೆ ಕೆವೈಸಿ (Know Your Customer) ಪ್ರಕ್ರಿಯೆ ಮುಗಿದಿಲ್ಲ. ಹಾಗಾಗಿ, ಸೆಪ್ಟೆಂಬರ್ 30ರೊಳಗೆ ಎಲ್ಲ ಜನಧನ್ ಖಾತೆಗಳಿಗೆ ಕೆವೈಸಿ ಮಾಡಿಸಬೇಕು ಎಂದು ಆರ್ ಬಿ ಐ ಆದೇಶ ಹೊರಡಿಸಿದೆ.
ಹಲವು ಉದ್ದೇಶಗಳನ್ನು ಇಟ್ಟುಕೊಂಡು ಆರ್ ಬಿ ಐ ಹೊಸ ನಿಯಮ ರೂಪಿಸಿದೆ. ಬ್ಯಾಂಕುಗಳು ನಿಯಮಿತವಾಗಿ ಗ್ರಾಹಕರ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಗ್ರಾಹಕರು ಇನ್ನೂ ಜೀವಂತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು. ವ್ಯಕ್ತಿಯ ವಿಳಾಸ, ಫೋನ್ ನಂಬರ್, ಇತರ ದಾಖಲೆಗಳಲ್ಲಿ ಬದಲಾವಣೆಗಳಿದ್ದರೆ ಅಪ್ಡೇಟ್ ಮಾಡಲು. KYC ಇಲ್ಲದ ಖಾತೆಗಳನ್ನು ಬಳಸಿ ಕಳ್ಳತನ ವಂಚನೆ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತಿದೆ.
ಅದಲ್ಲದೆ, ಕೆವೈಸಿ ಮುಗಿಸಲು ಗ್ರಾಮ ಪಂಚಾಯಿತಿ ಕಚೇರಿ, ಬ್ಯಾಂಕ್ ಶಾಖೆಗಳಲ್ಲಿ ಕೆವೈಸಿ ಕ್ಯಾಂಪ್ ಗಳನ್ನು ಕೂಡ ನಡೆಸಲಾಗುತ್ತಿದೆ. ಹಾಗಾಗಿ, ಖಾತೆದಾರರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ನೀಡಿ ಕೆವೈಸಿ ಮುಗಿಸಬಹುದಾಗಿದೆ.
ಹಾಗೊಂದು ವೇಳೆ, ಸೆಪ್ಟೆಂಬರ್ 30ರ ನಂತರ KYC ಪೂರ್ಣಗೊಳಿಸದ ಖಾತೆಗಳನ್ನು ಸ್ಥಗಿತಗೊಳಿಸಬಹುದು. ಇದರಿಂದ ನಿಮ್ಮ ಬ್ಯಾಂಕಿಂಗ್ ಸೌಲಭ್ಯಗಳು (ಡೆಬಿಟ್ ಕಾರ್ಡ್, ಡಿಜಿಟಲ್ ಪಾವತಿ, ಲೋನ್ ಅರ್ಜಿ) ಬಳಸಲು ತೊಂದರೆಯಾಗಬಹುದು. ಪಿಎಂ ಜನಧನ್ ಯೋಜನೆಯು ದೇಶದ ದೂರದ ಪ್ರದೇಶಗಳವರೆಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಿದೆ. KYC ನವೀಕರಣದ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.



















