ಬೆಂಗಳೂರು: ನಗರದ ಪ್ರಮುಖ ಸ್ಥಳವೊಂದಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, ರಾಮಕೃಷ್ಣ ಹೆಗಡೆ ಅವರ ಹೆಸರು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಹೀಗಾಗಿ ನಿಮ್ಮೆಲ್ಲರ ಜೊತೆ ಒಂದು ದಿನ ಚರ್ಚೆ ಮಾಡಿ, ಬೆಂಗಳೂರಿನ ಪ್ರಮುಖ ಸ್ಥಳಕ್ಕೆ ಅವರ ಹೆಸರು ಇಡಲಾಗುವುದು. ಇದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ.
“ಹೆಗಡೆ ಅವರದ್ದು ಪರಿಶುದ್ಧ ಆಡಳಿತ ಹಾಗೂ ರಾಜಕಾರಣ:”
ರಾಮಕೃಷ್ಣ ಹೆಗಡೆ ಅವರಲ್ಲಿ ಕ್ಷಮಿಸುವ ಗುಣ, ಹೃದಯ ಶ್ರೀಮಂತಿಕೆ ಇತ್ತು. ನಾವು ಎಂದಿಗೂ ಅವರಲ್ಲಿ ದ್ವೇಷ ರಾಜಕಾರಣ ನೋಡಲಿಲ್ಲ. ಇದು ನಮ್ಮೆಲ್ಲರಿಗೂ ದೊಡ್ಡ ಆದರ್ಶ. ಅವರದ್ದು ಪರಿಶುದ್ಧ ಆಡಳಿತ ಹಾಗೂ ರಾಜಕಾರಣ. ರಾಮಕೃಷ್ಣ ಹೆಗಡೆ ಅವರು ಕನಕಪುರದಿಂದ ಸ್ಪರ್ಧೆ ಮಾಡಿದ್ದರು. ಅವರನ್ನು ಸೋಲಿಸಲು ನಾನು ವಿದ್ಯಾರ್ಥಿ ನಾಯಕನಾಗಿ ಹೋರಾಟ ಮಾಡಿದ್ದೆ. ನನ್ನ ಹೋರಾಟ ಗಮನಿಸಿ 1985ರಲ್ಲಿ ಪಕ್ಷ ನನಗೆ ಟಿಕೆಟ್ ನೀಡಿತ್ತು. ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಆಗ ನನ್ನ ನಾಯಕತ್ವಕ್ಕೆ ಬೆಂಬಲ ಸಿಗಲಿಲ್ಲ ಎಂದು ಮತ್ತೆ ಚುನಾವಣೆಗೆ ಹೋದರು ಎಂದು ಮೆಲುಕು ಹಾಕಿದ್ದಾರೆ.
1985ರಲ್ಲಿ ನನಗೆ ದೇವೇಗೌಡರ ವಿರುದ್ಧ ಸಾತನೂರಿನಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿತ್ತು. ಆಗ ನಾನು ಸೇರಿದಂತೆ ಬಹುತೇಕರು ಹೆಗಡೆ ಅವರ ಹೆಸರಿನ ಅಲೆಯಲ್ಲಿ ಕೊಚ್ಚಿ ಹೋದೆವು. ನಂತರ ನಾನು ಜಿಲ್ಲಾ ಪರಿಷತ್ ಸದಸ್ಯನಾಗಿ ರಾಜಕೀಯ ಮುಂದುವರಿಸಿದೆ. ರಾಜೀವ್ ಗಾಂಧಿ ಅವರು ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಮಾಡಿದಾಗ ಕರ್ನಾಟಕಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರು ಹಾಕಿದ್ದ ಅಡಿಪಾಯದ ಅಧ್ಯಯನ ಮಾಡಿದ್ದರು. ಅದರ ಪರಿಣಾಮ ಇಂದು ನಾವು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಸಾವಿರಾರು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ಸ್ಮರಿಸಿದಿದ್ದಾರೆ.
ನಾನು ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನೋಡಿದ್ದೇನೆ. ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ನಡೆದ ಚರ್ಚೆಯಲ್ಲಿ ಹೆಗಡೆ ಅವರು ಮಾಡಿದ ಭಾಷಣ ನಾನು ಕಂಡ ಅತ್ಯುತ್ತಮ ಭಾಷಣಗಳಲ್ಲಿ ಒಂದು. ವೀರೇಂದ್ರ ಪಾಟೀಲರ ಜೊತೆ ಉತ್ತಮ ಸ್ನೇಹ ಹೊಂದಿದ್ದರೂ ಕೂಡ ಅವರು ತಮ್ಮ ಪಕ್ಷದ ಸಿದ್ಧಾಂತದ ಗೆರೆ ದಾಟಲಿಲ್ಲ ಎಂದು ಶ್ಲಾಘಿಸಿದ್ದಾರೆ.
“ಹೆಗಡೆ ಅವರ ಬೆಂಬಲ ಕೋರಿದ್ದೆ:”
ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಸಂಸತ್ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿತ್ತು. ಆಗ ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ಅವರ ನಡುವೆ ಭಿನ್ನಾಭಿಪ್ರಾಯ ಇತ್ತು. ಆಗ ನಾನು ಹೆಗಡೆ ಅವರ ಬೆಂಬಲ ಕೋರಲು ಹೋಗಿ ಭೇಟಿ ಮಾಡಿದ್ದೆ. ಆಗ ಹೆಗಡೆ ಅವರು, ನಾನು ಪಕ್ಷದ ವ್ಯವಸ್ಥೆಯಲ್ಲಿದ್ದೇನೆ, ಹೀಗಾಗಿ ನಿನಗೆ ಬೆಂಬಲ ನೀಡುವ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನಿನಗೆ ಒಳ್ಳೆಯದಾಗಲಿ ಎಂದು ನೇರವಾಗಿ ಹೇಳಿದ್ದರು. ಅಂದು ಅವರ ಪಕ್ಷದ ಅಭ್ಯರ್ಥಿಗೆ ಹೆಗಡೆ ಅವರು ಸಹಾಯ ಮಾಡದೇ ಇದ್ದಿದ್ದರೆ ಆ ಚುನಾವಣೆಯಲ್ಲಿ ನಾನು ಗೆದ್ದು ಸಂಸತ್ತಿಗೆ ಹೋಗುತ್ತಿದ್ದೆ ಎಂದು ತಿಳಿಸಿದ್ದಾರೆ.
“ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇ ಅವರು:”
ಬೆಂಗಳೂರು ಜಾಗತಿಕ ನಗರವಾಗಿದೆ. 25 ಲಕ್ಷ ಐಟಿ ಉದ್ಯೋಗಿಗಳು ಇಲ್ಲಿದ್ದಾರೆ. 2 ಲಕ್ಷ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಇಂದು ಈ ಮಟ್ಟಕ್ಕೆ ಬೆಳೆಯಲು ರಾಮಕೃಷ್ಣ ಅವರ ಕಾಲದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕೊಟ್ಟ ಅನುಮತಿಯೂ ಒಂದು ಕಾರಣ. ಅದರಿಂದ ಬೆಂಗಳೂರಿನಲ್ಲಿ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿನ ಎಂಜಿನಿಯರ್ ಕಾಲೇಜುಗಳಲ್ಲಿ ಸಜ್ಜನ್ ಜಿಂದಾಲ್ ಸೇರಿದಂತೆ ಅನೇಕ ಉದ್ಯಮಿಗಳು ಹೊರಗಿನಿಂದ ಬಂದು ಇಲ್ಲಿ ಓದುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಕಾವೇರಿ ನೀರು ಬರಲು ರಾಮಕೃಷ್ಣ ಹೆಗಡೆ ಅವರೇ ಕಾರಣ. ನಾವು ಈಗ ಆರನೇ ಹಂತದ ಯೋಜನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.