ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ. ಗ್ಯಾರಂಟಿಗೆ ಎಷ್ಟು ಬೇಕೋ ಅಷ್ಟು ತೆರಿಗೆ ಹಾಕುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶೇ. 40 ಹಣ ಲೂಟಿ ಮಾಡುತ್ತಿದೆ. ಯಾವುದೇ ತೆರಿಗೆ ಹಾಕದೇ ಗ್ಯಾರಂಟಿಗಳನ್ನು ಕೊಟ್ಟು ಕರ್ನಾಟಕವನ್ನು ದೇವಲೋಕ ಮಾಡುತ್ತೇವೆ ಅಂದಿದ್ದರು. ಆದರೆ, ಈಗ ಗ್ಯಾರಂಟಿಗಾಗಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಬೆಲೆ ಏರಿಕೆ ತಡೆದಕೊಳ್ಳಲು ಆಗುತ್ತಿಲ್ಲ. ಅದಕ್ಕೆ 2 ಸಾವಿರ ಕೊಟ್ಟು ಜನರಿಗೆ ಸಮಾಧಾನ ಮಾಡುತ್ತಿದ್ದೇವೆ ಅಂತ ಡಿಕೆಶಿ ಹೇಳಿದ್ದಾರೆ. ಬೆಲೆ ಏರಿಕೆ ಮಾಡಿ 2 ಸಾವಿರ ಕೊಡುವುದು ಮೋಸ. ಕಾಂಗ್ರೆಸ್ ರಾಜ್ಯದ ಜನರ ಜೇಬಿನ ದರೋಡೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಯಶಸ್ವಿಯಾಗಿ ಜನಾಕ್ರೋಶ ನಡೆಸಿದ್ದೇವೆ. ಈ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಸಹಜವಾಗಿ ಸರ್ಕಾರಕ್ಕೆ ಚುನಾವಣೆ ಬಂದಾಗ ವಿರೋಧ ಅಲೆ ಬರುತ್ತದೆ. ಆದರೆ, ಈ ಸರ್ಕಾರಕ್ಕೆ ಒಂದು ವರ್ಷಕ್ಕೆ ವಿರೋಧ ಅಲೆ ಎದುರಾಗಿದೆ. ಕಾಂಗ್ರೆಸ್ ನಾಯಕರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ಕೆಲಸವಾಗಿ ಬಿಟ್ಟಿದೆ. ಹೀಗಾಗಿ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದಾರೆ. ಒಬ್ಬರಿಗೆ ಕೆಪಿಸಿಸಿ ಕುರ್ಚಿ ಉಳಿಸಿಕೊಳ್ಳುವ ಯೋಚನೆ. ಮತ್ತೊಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಚಿಂತೆ ಶುರುವಾಗಿದೆ ಎಂದು ಹೇಳಿದ್ದಾರೆ.
ಗ್ಯಾಸ್ ಸಿಲಿಂಡರ್ 50 ರೂ. ಹೆಚ್ಚಳವಾಗಿರುವುದು ಹೊರೆಯಾಗುವುದಿಲ್ಲ. ಗ್ಯಾಸ್ ದರ ಏರಿಕೆಯಾದರೆ ಹೋಗಿ ದೆಹಲಿ ಕಚೇರಿ ಎದುರು ಹೋರಾಟ ಮಾಡಿ. ಅದನ್ನು ನಮಗೆ ಹೇಳಲು ಬರಬೇಡಿ. ಹಳೆಯ ಸಿದ್ದರಾಮಯ್ಯಗೂ ಹೊಸ ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸ ಇದೆ. ಸಿದ್ದರಾಮಯ್ಯಗೆ ಮರೆವು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಏಕೆ ನಮಗೆ ಕಪಾಳಮೋಕ್ಷ ಮಾಡುತ್ತದೆ? ಎಂಪಿಗಳು ಎಲೆಕ್ಟ್ ಆಗಿರುವುದು ಯಾವ ಕಾರಣಕ್ಕೆ? ಸರ್ಕಾರಿ ನೌಕರರಿಗೂ ಹಣ ಕೊಡುವುದಕ್ಕೂ ಇವರ ಬಳಿ ಹಣವಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಗಳಿಗೆ ಎರಡು ತಿಂಗಳಿಗೊಮ್ಮೆ ಸಂಬಳ ಕೊಡುತ್ತಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಸಂಬಳ ಕೊಡುವ ಯೋಗ್ಯತೆ ಇಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ, 15 ಸಾವಿರ ಕೋಟಿ ಸಾಲ ಏಕೆ ಮಾಡಿದ್ರಿ? ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಸಿದ್ದರಾಮಯ್ಯ ಡಿಕೆಶಿ ಒಪ್ಪಂದದ ಮೇಲೆ ಅಧಿಕಾರದಲ್ಲಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನ ಇಲ್ಲ. ಡಿಕೆಶಿ ಕೇಂದ್ರ ನಾಯಕರಿಗೆ ಒಳ್ಳೆಯ ಪೇಮೆಂಟ್ ಮಾಡಿದ್ದಾರೆ. ಸಿದ್ದರಾಮಯ್ಯ ಪೇಮೆಂಟ್ ಮಾಡುವುದರಲ್ಲಿ ಎಡವಿದ್ದಾರೆ. ಸಿದ್ಧರಾಮಯ್ಯರನ್ನು ಇಳಿಸುವುದಕ್ಕೆ ಡಿಕೆಶಿ ಹಿಂದುಳಿದ ವರ್ಗದ ಸಮಾವೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿನ್ನದ ಕಳ್ಳತನ ಕೇಸ್, ರಾಜಣ್ಣ ಹನಿಟ್ರ್ಯಾಪ್ ಕೇಸ್ ಗಳನ್ನು ಈ ಸರ್ಕಾರ ಮುಚ್ಚಿ ಹಾಕಿದೆ. ಮುಚ್ಚಿ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ಆರೋಪಿಸಿದ್ದಾರೆ.
ಸಮನ್ವಯ ಸಮಿತಿ ಬಗ್ಗೆ ಕುಮಾರಸ್ಬಾಮಿ ಜೊತೆ ಮಾತನಾಡಿದ್ದೇನೆ. ಅಧಿವೇಶನದ ಒಳಗಡೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಜೆಡಿಎಸ್ ಜೊತೆ ಚರ್ಚೆ ಮಾಡುತ್ತೇವೆ. ಅವರ ಹೋರಾಟ ಅವರು ಮಾಡುತ್ತಾರೆ. ನಮ್ಮ ಹೋರಾಟ ನಾವು ಮಾಡುತ್ತೇವೆ. ಮೈಸೂರು ಹೋರಾಟ ಆದ ಮೇಲೆ ಜೆಡಿಎಸ್ ಕೂಡ ಹೋರಾಟ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹೊರಗಡೆ ಆಗುವ ಹೋರಾಟವನ್ನು ಒಟ್ಟಾಗಿ ಮಾಡಬೇಕೆಂದು ನಾನು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ.
ಕಾಂಗ್ರೆಸ್ ಸರ್ಕಾರವು ಕುಮಾರಸ್ವಾಮಿ, ರೇವಣ್ಣ ಅವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ಅವರ ಜಮೀನಿನ ಬಗ್ಗೆ ಸರ್ಕಾರ ಏಕೆ ತನಿಖೆ ಮಾಡಬೇಕು? ಅದನ್ನು ಪೊಲೀಸ್ ನವರು ಮಾಡಬೇಕು. ಅಬಕಾರಿ ಇಲಾಖೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಲೂಟಿ ಇಲಾಖೆಯಾಗಿದೆ. ವೈನ್ ಸ್ಟೋರ್ ಅಲಾಟ್ಮೆಂಟ್ ಮಾಡುವುದರಲ್ಲೇ ಕೋಟಿ ರೂಪಾಯಿ ನುಂಗುತ್ತಿದ್ದಾರೆ. ವೈನ್ ಸ್ಟೋರ್ ಗೆ ಇಷ್ಟು ದುಡ್ಡು ಕೊಡಬೇಕು ಎಂದು ಬಹಿರಂಗವಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸರ್ಕಾರ ಹೇಗೆ ನಡೆಸಬೇಕು? ಎಂಬುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಬಯಲಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.


















