ಡಿಸಿಎಂ ಡಿಕೆ ಶಿವಕುಮಾರ್ ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿ ನೀಡಿರುವ ಹೇಳಿಕೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ವಿಷಯವಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಕೇರಳ-ಕರ್ನಾಟಕವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766 ಬಂಡೀಪುರ ಅಭಯಾರಣ್ಯದ ಮಧ್ಯೆ ಹಾದುಹೋಗಿದ್ದು, ಇಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧವಿದೆ. ಡಿಕೆ ಶಿವಕುಮಾರ್ ರಾತ್ರಿ ವೇಳೆ ವಾಹನ ಸಂಚಾರ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಕೇರಳ ವಯನಾಡಿನಲ್ಲಿ ಭರವಸೆ ನೀಡಿರುವುದು ರಾಜ್ಯದ ಜನತೆಗೆ ಆಘಾತ ನೀಡಿದಂತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಕ್ರೋಶ ಹೊರಹಾಕಿದ ಅವರು, ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766 ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಡಿಸಿಎಂ ಹೇಳಿರುವ ಹೇಳಿಕೆ ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.
ಬಂಡೀಪುರ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ವೈವಿಧ್ಯತೆಯು ಅದರೊಳಗೆ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಪ್ರಭೇದಗಳ ವನ್ಯಜೀವಿಗಳಿಗೆ ಸೇರಿದ ಸಂಪತ್ತು. ಈ ಅಭಯಾರಣ್ಯದ ಮೂಲಕ ರಾತ್ರಿ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ವನ್ಯಜೀವಿಗಳಿಗೆ ಅಪಾಯವಿದೆ ಮತ್ತು ಮಾನವ-ವನ್ಯಜೀವಿ ಸಂಘರ್ಷಕ್ಕೆ ಇದು ದಾರಿ ಮಾಡಿಕೊಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೇರೆ ರಾಜ್ಯದಲ್ಲಿನ ಚುನಾವಣಾ ಲಾಭಕ್ಕಾಗಿ ಕರ್ನಾಟಕದ ವನ್ಯಜೀವಿಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ. ನಮ್ಮ ಸರ್ಕಾರವು ಈ ಪರಿಸರ ವಲಯಗಳ ರಕ್ಷಣೆಯ ನಿಟ್ಟಿನಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.