ಬೆಂಗಳೂರು: ಕಳೆದ 18 ಘಂಟೆಗಳಿಂದ ಬೆಂಗಳೂರಿನಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಸಾಕಷ್ಟು ಅವಾಂತರಗಳೇ ಸೃಷ್ಟಿಯಾಗಿವೆ.
ನಗರದ ಒಂದಿಲ್ಲೊಂದು ಬಡಾವಣೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದ್ದು, ಜನ – ಜೀವನ ಅಸ್ತವ್ಯಸ್ಥವಾಗುತ್ತಿದೆ. ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಚಿಣ ಸೇರಿದಂತೆ ಇಡೀ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದಾಗಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮಳೆಯ ರಗಳೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ಜನ ಬೆಚ್ಚಿ ಬಿದ್ದಿದ್ದಾರೆ.
ಅಷ್ಟಕ್ಕೂ ಇಂತಹ ಮಳೆಗೆ ನಗರದೊಳಗೆ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಏಕೆ? ಟ್ರಾಫಿಕ್ ಜಾಮ್ ಏಕೆ? ಎಂಬುವುದನ್ನು ನೋಡುವುದಾದರೆ…
- ಅವೈಜ್ಞಾನಿಕ ಕಾಮಗಾರಿಗಳು.
- ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣವಾಗದೇ ಇರುವುದು.
- ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅವಕಾಶ ಇಲ್ಲದೇ ಇರುವುದು.
- ಕಸ ಕಡ್ಡಿಗಳನ್ನು ರಾಜಕಾಲುವೆಗೆ ಎಸೆದು ಅದರಲ್ಲಿನ ಹೂಳು ತೆಗೆಯದೇ ಇರುವುದು.
- ಬೆಂಗಳೂರಿನ ಹೊರವಲಯ ಎನಿಸಿಕೊಂಡಿರುವ ಬೊಮ್ಮನಹಳ್ಳಿ, ಕೆ.ಆರ್. ಪುರಂ, ಮಹದೇವಪುರ, ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಹೆಚ್ಚಿನ ಅವಾಂತರ ಏಕೆಂದರೆ ಈವರೆಗೂ ಸಮರ್ಪಕವಾಗಿ ಸಿಗದ ನಮ್ಮ ಮೆಟ್ರೋ ಕಾಮಗಾರಿ ಮುಕ್ತಾಯವಾಗದೇ ಇರುವುದು.
- ಕೆಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ್ರೂ, ಅದನ್ನು ಸಂಪರ್ಕಿಸದೇ ಇರುವುದು.
- ಬೆಂಗಳೂರಿನಲ್ಲಿ ಜನಸಂಖ್ಯೆಯ ಮುಕ್ಕಾಲು ಭಾಗದಷ್ಟು ವಾಹನಗಳು ಪ್ರತಿನಿತ್ಯ ರಸ್ತೆಗೆ ಇಳಿಯುವುದು.
- ಒಬ್ಬೊಬ್ಬರೇ ಓಡಾಡಲು ಅತಿ ದೊಡ್ಡ ಕಾರುಗಳ ಬಳಕೆಯೂ ಟ್ರಾಫಿಕ್ ಜಾಮ್‌ಗೆ ಒಂದು ಕಾರಣ ಎನ್ನಬಹುದು.
- ಇನ್ನು ರಿಂಗ್ ರಸ್ತೆಗಳಲ್ಲಿ ಕೆಲವೆಡೆ ವೈಟ್ ಟ್ಯಾಪಿಂಗ್ ಕಾಮಗಾರಿ ಪೂರ್ಷವಾಗದೇ ಇರುವುದು, ಅಲ್ಲಲ್ಲಿ ವಾಹನಗಳನ್ನು ಬೇರೆ ಬೇರೆ ರಸ್ತೆಗಳಿಗೆ ಡೈವರ್ಟ್ ಮಾಡುವುದು ಕೂಡ ಮಳೆಯ ಸಂದರ್ಭದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣ ಎನ್ನಬಹುದು.
- ಟ್ರಾಫಿಕ್ ಜಾಮ್ ಆಗದಂತೆ ಎಚ್ಚರವಹಿಸಲು ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆ ಮಾಡದೇ ಇರುವುದು. ತಮ್ಮ ತಮ್ಮ ಸ್ವಂತ ವಾಹನದಲ್ಲೇ ರಸ್ತೆಗೀಳಿಯುವುದು.
- ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅವೈಜ್ಞಾನಿಕವಾಗಿ ಬಡಾವಣೆಗಳ ನಿರ್ಮಾಣ.
- ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚದೆ ಇರುವುದು.
ಹೀಗೆ ಸಾಲು ಸಾಲು ಕಾರಣಗಳನ್ನು ಮಳೆಯ ರಗಳೆಯ ಜೊತೆಗೆ ಟ್ರಾಫಿಕ್ ಜಾಮ್ ಕಿರಿಕಿರಿಯನ್ನು ತರಿಸುತ್ತಿರುವುದು. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕರ್ತವ್ಯ ಪಾಲಿಸಿದರೆ, ಟ್ರಾಫಿ ಸಮಸ್ಯೆ, ಮಳೆಯ ತೊಂದರೆ ತಪ್ಪಿಸಬಹುದು.