ಬೆಂಗಳೂರು: ಎಂಇಎಸ್ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಬಂದ್ (Karnataka Bandh) ಗೆ ಕರೆ ನೀಡಲಾಗಿದೆ. ಹೀಗಾಗಿ ಇಂದು ರಾಜ್ಯಾದ್ಯಂತ ಕರ್ನಾಟಕ ಬಂದ್ ಇದೆ. ಆದರೆ, ಬಂದ್ ಗೆ ಬೆಳಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಬಲವಂತವಾಗಿ ಬಂದ್ ಮಾಡಿಸಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಬಂದ್ ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಬೆಂಗಳೂರಿನ (Bengaluru) ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಸಂಘಟನೆಗಳಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಬೆಂಗಳೂರಿನಲ್ಲಿ ಬೆಳಗ್ಗೆ ಜನ- ಜೀವನ ಎಂದಿನಂತೆ ಇದ್ದು, ಬಂದ್ ಸಂಪೂರ್ಣ ವಿಫಲವಾಗಿದೆ. ಬಿಎಂಟಿಸಿ ಬಸ್ ಗಳು, ಕ್ಯಾಬ್, ಆಟೋ ಎಂದಿನಂತೆ ಸಂಚರಿಸುತ್ತಿವೆ. ಮಾರುಕಟ್ಟೆ ತೆರೆದಿವೆ. ಎಂದಿನಂತೆ ಜನ ಜೀವನ ಸಾಗುತ್ತಿದೆ.
ಬಂದ್ ಇರುವ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಗಸ್ತಿನಲ್ಲಿದ್ದಾರೆ. ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಲವಂತವಾಗಿ ಬಂದ್ ಮಾಡಿಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್‌ನಲ್ಲಿ ಖಾಕಿ ಅಲರ್ಟ್ ಆಗಿದ್ದು 4 ಎಸಿಪಿ ಸೇರಿದಂತೆ 11 ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೀದರ್,ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ಸಿಕ್ಕಿಲ್ಲ.