ಚೆನ್ನೈ: ಭಾರತೀಯ ನೌಕಾಪಡೆಯ ಮಹಾನಿರ್ದೇಶಕರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಕೋಸ್ಟ್ ಗಾರ್ಡ್ (ICG) ಮಹಾನಿರ್ದೇಶಕ ರಾಕೇಶ್ ಪಾಲ್(Rakesh Pal) ಹೃದಯಾಘಾತ(Heart attack)ದಿಂದಾಗಿ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಶನಿವಾರ ಆಗಮಿಸಿದ್ದರು. ಈ ವೇಳೆ ಅವರು ಹೆಚ್ಚು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಕೇಶ್ ಪಾಲ್ ಅವರು ಕಳೆದ ತಿಂಗಳಷ್ಟೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಮ್ಮ ವಿಶೇಷ ಸೇವೆ ವಿಶಿಷ್ಟ ಸೇವಾ ಪದಕ ಪಡೆದಿದ್ದರು.
ರಾಕೇಶ್ ಪಾಲ್ ಅವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಆತ್ಮಕ್ಕೆ ಶಾಂತಿ ಕೋರಿದ್ದಾರೆ.
‘ರಾಕೇಶ್ ಪಾಲ್ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಸಮರ್ಥ ಮತ್ತು ಬದ್ಧ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ICG ಭಾರತದ ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ದೊಡ್ಡ ದಾಪುಗಾಲುಗಳನ್ನು ಇಡುತ್ತಿತ್ತು. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬರೆದುಕೊಂಡಿದ್ದಾರೆ. ರಾಕೇಶ್ ಪಾಲ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.