ನವದೆಹಲಿ: “ಫುಲೆ” ಚಲನಚಿತ್ರಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ “ಬ್ರಾಹ್ಮಣರ ಮೇಲೆ ನಾನು ಮೂತ್ರ ವಿಸರ್ಜನೆ ಮಾಡುತ್ತೇನೆ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು(Anurag Kashyap Row) ಈಗ ಅಶ್ಲೀಲ ಎಂದು ಪರಿಗಣಿಸಲಾದ ತಮ್ಮ ಹೇಳಿಕೆಗೆ ಸಂಬಂಧಿಸಿ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಿದ್ದಾರೆ. ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ ಅವರು, ಸಿಟ್ಟಿನ ಭರದಲ್ಲಿ ಸಂಯಮವನ್ನು ಕಳೆದುಕೊಂಡು ಈ ರೀತಿ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮಂಗಳವಾರ ಈ ಬಗ್ಗೆ ಬರೆದುಕೊಂಡಿರುವ ಅನುರಾಗ್ ಕಶ್ಯಪ್, “ನಾನು ಕೋಪದ ಭರದಲ್ಲಿ, ಯಾರಿಗೋ ಒಬ್ಬರಿಗೆ ಪ್ರತಿಕ್ರಿಯಿಸುವ ವೇಳೆ ನನ್ನ ಸಭ್ಯತೆಯನ್ನು ಮರೆತು, ಇಡೀ ಬ್ರಾಹ್ಮಣ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ. ಆ ಸಮುದಾಯದ ಅನೇಕ ಸದಸ್ಯರು ನನ್ನ ಜೀವನದ ಭಾಗವಾಗಿದ್ದಾರೆ. ಇಂದು, ಅವರೆಲ್ಲರಿಗೂ ನನ್ನಿಂದ ನೋವಾಗಿದೆ. ನನ್ನಿಂದಾಗಿ ನನ್ನ ಕುಟುಂಬಕ್ಕೂ ನೋವಾಗಿದೆ.
ನಾನು ಗೌರವಿಸುವಂಥ ಅನೇಕ ಬುದ್ಧಿಜೀವಿಗಳು ಕೂಡ ನನ್ನ ಕೋಪ ಮತ್ತು ನಾನು ಮಾತನಾಡಿದ ರೀತಿಯಿಂದ ನೊಂದಿದ್ದಾರೆ. ಅಂತಹ ಹೇಳಿಕೆ ನೀಡುವ ಮೂಲಕ ನಾನು, ನೈಜ ವಿಷಯ ಬಿಟ್ಟು, ಚರ್ಚೆಯಾಗುತ್ತಿದ್ದ ವಿಚಾರದ ಹಳಿ ತಪ್ಪಿಸಿದಂತಾಗಿದೆ. ನಾನು ಪ್ರಾಮಾಣಿಕವಾಗಿ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿರಲಿಲ್ಲ. ಯಾರದ್ದೋ ಕೆಟ್ಟ ಕಾಮೆಂಟ್‌ಗೆ ಪ್ರತಿಕ್ರಿಯಿಸುವ ಭರದಲ್ಲಿ ಅಂಥ ಮಾತುಗಳನ್ನು ಹೇಳಬೇಕಾಗಿ ಬಂತು.
ಅಂಥ ಅನುಚಿತ ಭಾಷೆಯನ್ನು ಬಳಸಿದ್ದಕ್ಕಾಗಿ ನನ್ನ ಎಲ್ಲಾ ಸ್ನೇಹಿತರು, ನನ್ನ ಕುಟುಂಬ ಮತ್ತು ಆ ಸಮುದಾಯಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ, ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಸಿಟ್ಟು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇನ್ನು ಯಾವುದೇ ವಿಚಾರ ಹೇಳುವುದಿದ್ದರೂ ಸರಿಯಾದ ಪದಗಳನ್ನೇ ಬಳಸುತ್ತೇನೆ. ನೀವು ನನ್ನನ್ನು ಕ್ಷಮಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಕಶ್ಯಪ್ ಅವರು ಇತ್ತೀಚೆಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಿವಿಧ ವಲಯಗಳಿಂದ ಟೀಕೆಗೂ ಕಾರಣವಾಗಿತ್ತು. ಈಗ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿರುವ ಅವರು, ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.



















