ಕಾಂಗ್ರೆಸ್ ನಲ್ಲಿ ಡಿನ್ನರ್ ಪಾರ್ಟಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಬಿಜೆಪಿಯಲ್ಲೂ ಡಿನ್ನರ್ ಪಾರ್ಟಿ ಜೋರಾಗಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರಾಜಿತ ಅಭ್ಯರ್ಥಿಗಳ ಡಿನ್ನರ್ ಪಾರ್ಟಿ ಕರೆದಿದ್ದಾರೆ.
ಮತ್ತೊಮ್ಮೆ ರಾಜ್ಯಾಧ್ಯಕ್ಷ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಬಿ.ವೈ. ವಿಜಯೇಂದ್ರ, ಇಂದು ಮಧ್ಯಾಹ್ನ ಭೋಜನಕೂಟದ ನೆಪದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಮುಂದಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಸಭೆ ನಡೆಯಲಿದೆ. ವಿಜಯೇಂದ್ರಗೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸಾಥ್ ನೀಡಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೆಪದಲ್ಲಿ ಈ ಸಭೆ ಕರೆಯಲಾಗಿದೆ..
ಪರಾಜಿತ ಅಭ್ಯರ್ಥಿಗಳು ಕಳೆದ ಒಂದುವರೆ ವರ್ಷದಿಂದ ಏನು ಮಾಡುತ್ತಿದ್ದಾರೆ? ಅವರು ಯಾವ ರೀತಿ ಸಂಘಟನೆಯಲ್ಲಿ ಗುರುತಿಸಿಕೊಳ್ಳಬೇಕು? ಎಂಬೆಲ್ಲ ಕುರಿತು ಚರ್ಚಿಸಲಾಗುತ್ತದೆ. ಅಲ್ಲದೇ, ಮುಂಬರುವ ಚುನಾವಣೆಗಳಲ್ಲಿ ಹಿನ್ನಡೆಯಾಗದಂತೆ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಸಲಹೆ ನೀಡಲು ಸಭೆ ಕರೆಯಲಾಗಿದೆ.
ಸದ್ಯದಲ್ಲೇ ಘೋಷಣೆಯಾಗುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ನಮಗೆ ಹಿನ್ನಡೆಯಾಗಬಹುದು. ಈ ನಿಟ್ಟಿನಲ್ಲಿ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಸಂಘಟನೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ದೃಷ್ಟಿಯಿಂದ ಯಾರೆಲ್ಲಾ ಆ್ಯಕ್ಟೀವ್ ಆಗಿದ್ದಾರೆ? ಯಾರೆಲ್ಲಾ ಆ್ಯಕ್ಟೀವ್ ಆಗಿಲ್ಲ? ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಸಭೆ ಕರೆಯಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ನಾಯಕರು ಇಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ವಿಜಯೇಂದ್ರ ಬಹುತೇಕ ನಾಯಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.