ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ವಿಚಾರವೂ ಚರ್ಚೆಯಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಖಾಸಗಿ ಸ್ಥಳದಲ್ಲಿ ಮೂವರು ‘ಕೈ’ ಸಚಿವರು ಡಿನ್ನರ್ ಮೀಟಿಂಗ್ ನಡೆಸಿರೋದು ಭಾರೀ ಕುತೂಹಲ ಮೂಡಿಸಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒನ್ ಟು ಒನ್ ಮೀಟಿಂಗ್ ನಡೆಸಿದ್ದು, ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಳಿಕ ಈ ಮೀಟಿಂಗ್‌ಗೆ ಸಚಿವ ಮಹದೇವಪ್ಪ ಕೂಡ ಸಾಥ್ ನೀಡಿದ್ದು, ಇದು ಮೀಟಿಂಗ್ ಅಲ್ಲ ಕೇವಲ ಈಟಿಂಗ್ ಎಂದು ಹೇಳಿ ಮೂವರು ಸಚಿವರು ತೆರಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಔತಣಕೂಟ : ಸಿಎಂ ಸಿದ್ದರಾಮಯ್ಯ ದಿಢೀರ್ ಡಬಲ್ ದಾಳ ಉರುಳಿಸಿದ್ದು, ಸಂಪುಟ ಪುನಾರಚನೆ ಬಗ್ಗೆ ಸಿಎಂ ಸುಳಿವು ಕೊಟ್ಟ ಬೆನ್ನಲ್ಲೇ ಬರುವ ಸೋಮವಾರ ಸಚಿವರಿಗೆ ಊಟಕ್ಕಾಗಿ ಆಹ್ವಾನಿಸಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಔತಣಕೂಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಸಚಿವರಿಗೆ ಸಿಎಂ ಔತಣಕೂಟ ಆಯೋಜಿಸಿರುವ ವಿಚಾರ ಸಂಬಂಧ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಂಪುಟ ಸರ್ಜರಿಗೆ ಪೂರಕವಾಗಿ ಔತಣಕ್ಕೆ ಕರೆದಿಲ್ಲ. ಶಾಸಕರನ್ನ ಸಿಎಂ ಊಟಕ್ಕೆ ಕರೆಯೋದು ಹೊಸದಲ್ಲ. ಸಿಎಂ, ಶಾಸಕರು, ಸಚಿವರ ಮಧ್ಯೆ ವಿಶ್ವಾಸ ಇದ್ದೇ ಇರುತ್ತೆ. ಊಟ ಹಾಕಿನೇ ವಿಶ್ವಾಸಕ್ಕೆ ತಗೋಬೇಕು ಅಂತಿದೆಯಾ? ಎಂದು ಹೇಳಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಂಪುಟ ಪುನಾರಚನೆ ನನಗೆ ಗೊತ್ತಿಲ್ಲ. ಅದು ಪಾರ್ಟಿ & ಸಿಎಂಗೆ ಬಿಟ್ಟ ವಿಚಾರ. ನಾನು ಯಾವುದಕ್ಕೂ ಭಾಗಿಯಾಗಲ್ಲ. ನನ್ನನ್ನು ಕರೆದು ಮಾತಾಡಿದ್ರೆ ಸಲಹೆ ಕೊಡ್ತೀನಿ. ಏನ್ ಸಹಾಯ ಕೊಡಬೇಕು ಕೊಡುತ್ತೇನೆ. ಬೇರೆ ಯಾವ ಚರ್ಚೆ ಮಾಡದು ಬೇಡ ಎಂದು ಡಿಕೆಶಿ ವಿನಂತಿ ಮಾಡಿದ್ದಾರೆ.