ಡಿಂಪಲ್ ಕ್ವೀನ್ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.
ಬೆಂಗಳೂರಿನ ಆರ್ಆರ್ ನಗರದಲ್ಲಿರುವ ನಟಿ ರಚಿತಾ ರಾಮ್ ನಿವಾಸದ ಬಳಿ ಕಾರ್ಯಕ್ರಮ ಜರುಗಿತು. ನಗರದ ನೂರಾರು ಆಟೋ ಚಾಲಕರು ನಟಿ ಮನೆ ಬಳಿ ಬಂದು ಸೇರಿದ್ದರು. ಈ ಸಂದರ್ಭ ರಚಿತಾ ರಾಮ್ ಅವರನ್ನು ಆಟೋ ಡ್ರೈವರ್ಸ್ ಅಸೋಸಿಯೇಷನ್ ಅಂಬಾಸಿಡರ್ ಆಗಿ ಘೋಷಿಸಲಾಯಿತು.
ಚಂದನವನದ ಚೆಲುವೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆಟೋ ಖಾಕಿ ಡ್ರೆಸ್ ತೊಟ್ಟು ಕಾಣಿಸಿಕೊಂಡಿದ್ದಾರೆ. ಆಟೋ ಎದುರು ನಿಂತು, ಡ್ರೈವರ್ ಸೀಟ್ನಲ್ಲಿ ಕುಳಿತು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ, ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.
ರಚಿತ ರಾಮ್ ಪೋಸ್ಟ್‌ರ್ ಶೇರ್ ಮಾಡಿ ಅತಿರಥ ಮಹಾರಥ ಸಾರಥಿಗಳಿಗೆ ನನ್ನ ನಮಸ್ಕಾರ. ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಬಹಳ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೂ ಆಟೋ ಚಾಲಕರಿಗೂ ವಿಶೇಷ ನಂಟಿದೆ. ಕನ್ನಡ ಸಿನಿಮಾಗಳನ್ನು ಪ್ರಚಾರ ಮಾಡುವಲ್ಲಿ ಆಟೋ ಚಾಲಕರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಅನೇಕ ಸ್ಟಾರ್ಸ್ ಈಗಾಗಲೇ ಆಟೋ ಚಾಲಕರ ಪಾತ್ರ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಇದೀಗ, ಬಹುಬೇಡಿಕೆ ನಟಿ ರಚಿತಾ ರಾಮ್ ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ : ಯೆಲ್ಲೋ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ | ನಾಳೆಯಿಂದ ಐದನೇ ರೈಲು ಚಲನೆ ; ಬಿಎಂಆರ್‌ಸಿಎಲ್ ಮಾಹಿತಿ


















