ಬರೇಲಿ : ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಭಾರೀ ಸೈಬರ್ ವಂಚನೆಯೊಂದು ತಪ್ಪಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸೈಬರ್ ವಂಚಕರು ಬಾಲಕನ ಪೋಷಕರನ್ನು ಬರೋಬ್ಬರಿ 10 ಗಂಟೆಗಳ ಕಾಲ ವಿಡಿಯೋ ಕರೆಯಲ್ಲಿ ‘ಡಿಜಿಟಲ್ ಅರೆಸ್ಟ್’ ಮಾಡಿ ಬೆದರಿಸಿದ್ದರು. ಆದರೆ, ಬಾಲಕನ ದಿಟ್ಟ ನಡೆಯಿಂದಾಗಿ ಕುಟುಂಬವು ಆರ್ಥಿಕ ನಷ್ಟದಿಂದ ಪಾರಾಗಿದೆ.
ಬರೇಲಿಯ ಪ್ರೇಮ್ ನಗರ ಪ್ರದೇಶದ ವ್ಯಾಪಾರಿ ಸಂಜಯ್ ಸಕ್ಸೇನಾ ಮತ್ತು ಅವರ ಪತ್ನಿ ವಂಚಕರ ಜಾಲಕ್ಕೆ ಸಿಲುಕಿದವರು. ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವಂಚಕರು, ತಾವು ತನಿಖಾ ಸಂಸ್ಥೆಯ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಸಂಜಯ್ ಅವರಿಗೆ ಉಗ್ರರೊಂದಿಗೆ ನಂಟಿದೆ ಮತ್ತು ಕೋಟ್ಯಂತರ ರೂಪಾಯಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ವಿಡಿಯೋ ಕರೆಯಲ್ಲಿ ನಕಲಿ ಬಂಧನ ವಾರೆಂಟ್ ಪ್ರದರ್ಶಿಸಿ ದಂಪತಿಯನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ.
10 ಗಂಟೆಗಳ ಕಾಲ ಕಣ್ಗಾವಲು, ಬ್ಯಾಂಕ್ ವಿವರ ಸಂಗ್ರಹ
ವಂಚಕರು ದಂಪತಿಗೆ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದರು. ಊಟ, ವಿಶ್ರಾಂತಿ ಸೇರಿದಂತೆ ಪ್ರತಿಯೊಂದು ಚಟುವಟಿಕೆಯನ್ನೂ ವಿಡಿಯೋ ಕರೆಯಲ್ಲಿಯೇ ಮಾಡಬೇಕು ಎಂದು ಬೆದರಿಸಿದ್ದರು. ಸರಿಸುಮಾರು 10 ಗಂಟೆಗಳ ಕಾಲ ನಿರಂತರವಾಗಿ ಕ್ಯಾಮೆರಾ ಕಣ್ಗಾವಲಿನಲ್ಲಿಟ್ಟಿದ್ದಲ್ಲದೆ, ಇದೇ ಅವಧಿಯಲ್ಲಿ ಬ್ಯಾಂಕ್ ಖಾತೆಯ ಸೂಕ್ಷ್ಮ ವಿವರಗಳನ್ನೂ ಸಂಗ್ರಹಿಸಿದ್ದರು. ದಂಪತಿ ತೀವ್ರ ಭಯಭೀತರಾಗಿದ್ದರಿಂದ ವಂಚಕರ ಯಾವುದೇ ಮಾತನ್ನು ಪ್ರಶ್ನಿಸುವ ಸಾಹಸ ಮಾಡಿರಲಿಲ್ಲ. ಇನ್ನೇನು ಅಕೌಂಟ್‌ನಿಂದ ಹಣ ವರ್ಗಾವಣೆಯಾಗಬೇಕು ಎನ್ನುವಷ್ಟರಲ್ಲಿ ಪರಿಸ್ಥಿತಿ ಬದಲಾಯಿತು.
ರಕ್ಷಕನಾಗಿ ಬದಲಾದ 8ನೇ ತರಗತಿಯ ಮಗ!
ಪೋಷಕರ ಆತಂಕ ಮತ್ತು ವಿಡಿಯೋ ಕರೆಯಲ್ಲಿದ್ದವರ ನಡವಳಿಕೆಯನ್ನು ಗಮನಿಸಿದ 8ನೇ ತರಗತಿಯ ವಿದ್ಯಾರ್ಥಿ, ಮಗ ತನ್ಮಯ್‌ಗೆ ಏನೋ ಸರಿಯಿಲ್ಲ ಎಂಬ ಅನುಮಾನ ಮೂಡಿದೆ. ತೀವ್ರ ಭಯದಲ್ಲಿದ್ದ ಪೋಷಕರು ವಿರೋಧಿಸಿದರೂ ಲೆಕ್ಕಿಸದ ಆತ, ರಾತ್ರಿ ವೇಳೆ ಧೈರ್ಯಮಾಡಿ ಮೊಬೈಲ್ ಫೋನ್ ಅನ್ನು ಏಕಾಏಕಿ ‘ಫ್ಲೈಟ್ ಮೋಡ್’ಗೆ ಹಾಕಿದ್ದಾನೆ. ಇದರಿಂದ ವಂಚಕರೊಂದಿಗಿನ ಸಂಪರ್ಕ ಕಡಿತಗೊಂಡು, ನಡೆಯಲಿದ್ದ ಭಾರೀ ಆರ್ಥಿಕ ವಂಚನೆ ಕೊನೆಯ ಕ್ಷಣದಲ್ಲಿ ವಿಫಲವಾಗಿದೆ.
ಮರುದಿನ ಬೆಳಿಗ್ಗೆ ಕುಟುಂಬವು ಪ್ರೇಮ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆ. ಪೊಲೀಸರ ಸಮ್ಮುಖದಲ್ಲಿ ಮೊಬೈಲ್ ಆನ್ ಮಾಡಿದಾಗ ವಂಚಕರು ಮತ್ತೆ ಸಂಪರ್ಕಿಸಲು ಯತ್ನಿಸಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿದ ಪೊಲೀಸರು ವಂಚಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಿಟಿ ಮನುಷ್ ಪರೀಕ್ ದೃಢಪಡಿಸಿದ್ದು, ಇಂತಹ ಬೆದರಿಕೆ ಕರೆಗಳು ಹಾಗೂ ಡಿಜಿಟಲ್ ಅರೆಸ್ಟ್ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು, ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿದು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ತುಷಾರ್ ಗಿರಿನಾಥ್ ಸೂಚನೆ


















