ಬೆಳಗಾವಿ : ಬೆಳಗಾವಿಯಲ್ಲಿ ಆಘಾತಕಾರಿ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ವೃದ್ಧ ಉದ್ಯಮಿಯೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಬರೋಬ್ಬರಿ 15 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಇಲ್ಲಿನ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗೆ ವಿಡಿಯೊ ಕಾಲ್ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಅಕ್ರಮ ಹಣ ವರ್ಗಾವಣೆ ಲಿಸ್ಟ್‌ನಲ್ಲಿ ಇದೆ. ನೀವು ಮನಿ ಲಾಂಡರಿಂಗ್ ಮಾಡುತ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ ತಾವು ಹೇಳಿದಂತೆ ಕೇಳಿದರೆ ನಿಮ್ಮನ್ನು ಕಾನೂನು ಸಂಕಷ್ಟದಿಂದ ಪಾರು ಮಾಡುತ್ತೇವೆ ಎಂದು ಹೇಳೀ, ಹಂತ ಹಂತವಾಗಿ 15 ಕೋಟಿ ಹಣ ಹಾಕಿಸಿಕೊಂಡು, ವಂಚನೆ ಎಸಗಿದ್ದಾರೆ.
ಮೊದಲಿಗೆ ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ಉದ್ಯಮಿಗೆ ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಮರಳಿಸುತ್ತೇವೆ ಎಂದು ನಂಬಿಸಿದ್ದಾರೆ. ಈ ರೀತಿ ವೃದ್ಧನಿಂದ ಹಂತ ಹಂತವಾಗಿ 15 ಕೋಟಿ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಂತ್ರಸ್ತನಿಗೆ ಅನುಮಾನ ಬಂದಿದೆ.
ಮಾ.18 ರಂದು ಉದ್ಯಮಿ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದರು. ಬಳಿಕ ಬೆಳಗಾವಿ ನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಸಿಇಎನ್ ಪೊಲೀಸರು ಸೈಬರ್ ವಂಚಕರ ಅಕೌಂಟ್ ಫ್ರೀಜ್ ಮಾಡಿದ್ದಾರೆ. ಅಲ್ಲದೇ ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ವಿಶೇಷ ತಂಡ ರಚಿಸಿದ್ದಾರೆ. ಈ ರೀತಿ ಸೈಬರ್ ವಂಚಕರ ಬೆದರಿಕೆ ಕರೆಗಳು ಬಂದರೆ ಹೆದರದೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಲಿ – JDS ನಾಯಕ ಅಮಾನುಲ್ಲಾ ಖಾನ್



















