ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಅಲ್ಲಿನ 8 ಜನ ಸೈನಿಕರು(Pakistani Soldiers) ಸಾವನ್ನಪ್ಪಿದ್ದಾರೆ.
ಬಂಡುಕೋರರು ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದ ಗಡಿಯಲ್ಲಿರುವ ಬನ್ನುನಲ್ಲಿರುವ ಸೇನಾ ಹೊರಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಆತ್ಮಾಹುತಿ ಬಾಂಬರ್‌ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದ್ದಾರೆ. ಪರಿಣಾಮ 8 ಜನ ಸೈನಿಕರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ 10 ಆಕ್ರಮಣಕಾರರನ್ನು ಸೈನಿಕರು ಕೊಂದಿದ್ದಾರೆ ಎಂದು ಅಲ್ಲಿನ ಮಿಲಿಟರಿ ಹೇಳಿದೆ. ಬಂಡುಕೋರರ ದಾಳಿಗೆ ಮೃತಪಟ್ಟವರಲ್ಲಿ ಏಳು ಸೇನಾ ಸದಸ್ಯರು ಮತ್ತು ಒಬ್ಬ ಅರೆಸೇನಾ ಯೋಧ ಇದ್ದಾನೆ ಎನ್ನಲಾಗಿದೆ. ಬಂಡುಕೋರರು ವಸತಿ ಪ್ರದೇಶಕ್ಕೆ ನುಸುಳಿ ದಾಳಿ ನಡೆಸಿದ್ದರಿಂದ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.