ಮಂಡ್ಯ: ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ಕೆ.ಆರ್.ಪೇಟೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ರೈತ ಸಂಘದ ಕಾರ್ಯಕರ್ತರ ಕಾರ್ಯಾಚರಣೆಯಿಂದ ಈ ದಂಧೆ ಪತ್ತೆಯಾಗಿದೆ.
ವಿಜಯಲಕ್ಷ್ಮಿ ರೈಸ್ ಮಿಲ್ ಬಳಿ ಸರ್ಕಾರಿ ಪಡಿತರ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ ವೇಳೆ, 64 ಮೂಟೆ ಗೋದಿ ಹಾಗೂ 48 ಮೂಟೆ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ಪಡಿತರನ್ನು ತಾಲೂಕಿನ ಗವಿಮಠದ ಮುರಾರ್ಜಿ ವಸತಿ ಶಾಲೆಗೆ ಸರಬರಾಜು ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಮನೆಗೆ ತೆರಳಿರುವ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ಶಾಲೆಗೆ ಮಂಜೂರಾದ ಪಡಿತರವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಮಾಹಿತಿ ಪಡೆದ ರೈತ ಸಂಘದವರು ಕಾರ್ಯಾಚರಣೆ ನಡೆಸಿ ದಂಧೆಯನ್ನು ಬಯಲಿಗೆಳೆದಿದ್ದಾರೆ.
ಘಟನೆಯ ಸಂಬಂಧ ಲಾರಿ ಹಾಗೂ ಪಡಿತರವನ್ನು ವಶಕ್ಕೆ ಪಡೆದು, ಲಾರಿ ಚಾಲಕನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಪ್ರಕರಣ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ದಿನೇ ದಿನೇ ಕಾವು ಪಡೆದುಕೊಳ್ಳುತ್ತಿರುವ ಸಂತೆಮಾವತ್ತೂರು ವಿಎಸ್‌ಎಸ್‌ಎನ್ ಅಕ್ರಮ ಚುನಾವಣೆ



















