ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರವಾಗಿ ಲಿಂಗಾಯತರು ಪ್ರತ್ಯೇಕ ಸಭೆ ಮಾಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಯತ್ನಾಳ್ ಮತ್ತಿತರರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ರಾಜ್ಯಧ್ಯಕ್ಷ ಸ್ಥಾನದಲ್ಲಿ ಒಬ್ಬರು ಇದ್ದಾರೆ. ಅಲ್ಲದೇ, ಚುನಾವಣೆ ಕೂಡ ಹತ್ತಿರ ಬಂದಿದೆ. ಯಾರನ್ನು ನೇಮಕ ಮಾಡಬೇಕು.
ಯಾರನ್ನು ಬಿಡಬೇಕು ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳುತ್ತದೆ. ಕೆಲವು ಆಂತರಿಕ ವಿಚಾರಗಳನ್ನು ನಾನು ಮಾಧ್ಯಮದ ಮುಂದೆ ಚರ್ಚಿಸುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಡುವ ಜವಾಬ್ದಾರಿಯನ್ನು ಅಷ್ಟೇ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.