ಮಂಡ್ಯ : ಕದ್ದುಮುಚ್ಚಿ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಅಪಾಯದಂಚಿನಲ್ಲಿರುವ ಮರ ಎಂದು ಬಿಂಬಿಸಿ ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಿ, ಅಕ್ರಮವಾಗಿ ಮರಗಳನ್ನು ಕಡಿಯಲು ಅನುಮತಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಮರಗಳ ತೆರವಿಗೆ ಮುಂದಾದ ಕಾರ್ಮಿಕರನ್ನು ತಡೆದ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಅಶೋಕ್ ನಗರ 3ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.
ಅಶೋಕ್ ನಗರದ 3ನೇ ಕ್ರಾಸ್ ನಲ್ಲಿದ್ದ ಮರಗಳನ್ನು ತೆರವುಗೊಳಿಸಲು ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ಆಗ ಮರಗಳನ್ನು ಕಡಿಯಲು ಟೆಂಡರ್ ಆಗಿದೆ ಎಂದು ಕಾರ್ಮಿಕರು ಹೇಳಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಬಂದಿದ್ದೇವೆಂದು ಉತ್ತರ ನೀಡಿದ್ದಾರೆ. ಆಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾರ್ಮಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕೂಡಲೇ RFO ಗೆ ಫೋನ್ ಮೂಲಕ ಕರೆ ಮಾಡಿ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಆಗ ಅಧಿಕಾರಿಗಳು ಯಾವುದೇ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.