ಹುಬ್ಬಳ್ಳಿ : ಆಹಾರದಲ್ಲಿ ವಿಷ ಹಾಕಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಮುಗಿಸುವ ಹುನ್ನಾರ ನಡೆದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಅರವಿಂದ್ ಬೆಲ್ಲದ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಲ್ಲದ, ಶ್ರೀಗಳ ಆರೋಗ್ಯ ಹದಗೆಟ್ಟಿದೆ. ಅವರಿಗೆ ಫುಡ್ ಪಾಯಿಸನ್ ಆಗಿದೆ ಅಂತ ಗೊತ್ತಿತ್ತು. ಆದರೆ ಇದರ ಹಿಂದೆ ಬೇರೆ ಏನೋ ಷಡ್ಯಂತ್ರ ಅಡಗಿದೆ. ಮಠದ ಹೊರಗಡೆ ಇಬ್ಬರು ಮುಸ್ಲಿಂ ಸಮಾಜದ ಹುಡುಗರು ಇದ್ದಾರೆ. ಆ ಇಬ್ಬರು ಮಠಕ್ಕೆ ಯಾರು ಬರ್ತಾರೆ ಯಾರು ಹೋಗುತ್ತಾರೆಂದು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ವೀಡಿಯೋ ಸಹ ಮಾಡಿಕೊಳ್ಳುತ್ತಿದ್ದಾರೆಂದು ಭಕ್ತರು ನನಗೆ ಹೇಳಿರುವುದಾಗಿ ಆರೋಪಿಸಿದ್ದಾರೆ.
ಅದೇ ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರು. ಈ ಬಗ್ಗೆ ಸ್ಥಳೀಯ ಭಕ್ತರು ಯುವಕರನ್ನು ವಿಚಾರಣೆ ಮಾಡಿದ್ದಾರೆ. ಆ ಯುವಕರು ಅಡುಗೆ ಮನೆಗೆ ಹೋಗಿ ಬಂದ ಕೆಲವೇ ಹೊತ್ತಿನಲ್ಲಿ ಶ್ರೀಗಳ ಆರೋಗ್ಯ ಹದಗೆಟ್ಟಿದೆ.
ಶ್ರೀಗಳು ಈ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದಾರೆ. ನನಗೆ ವಿಷ ಪ್ರಾಶನ ಆಗಿದೆ ಅಂತ ಶ್ರೀಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಊಟದ ಏನೋ ಹೆಚ್ಚು ಕಡಿಮೆ ಹಾಕಲಾಗಿದೆ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಸಮಾಜ ಇದನ್ನು ನೋಡುತ್ತಿದೆ. ಅವರು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಸಮಾಜ ನೀಡುತ್ತದೆ ಬೆಲ್ಲದ ಹೇಳಿದ್ದಾರೆ.



















