ಜೆರುಸಲೇಂ: ಸಲಿಂಗ ಸಂಬಂಧ ಹೊಂದಿದ್ದ ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ರೇಪ್ ಮಾಡಿದ್ದ ತನ್ನದೇ ಸದಸ್ಯರನ್ನು ಹಮಾಸ್ ಉಗ್ರರು ಚಿತ್ರಹಿಂಸೆ ನೀಡಿ, ಕೊಂದು ಹಾಕಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಪ್ಯಾಲೆಸ್ತೀನ್‌ನ ಹಮಾಸ್ ಸಂಘಟನೆಯ ರಹಸ್ಯ ದಾಖಲೆಯೊಂದರಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಈ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಕನಿಷ್ಠ 1200 ಮಂದಿಯನ್ನು ಹತ್ಯೆಗೈದಿದ್ದರು. ಹಲವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಈ ಸಮಯದಲ್ಲಿ ಹಮಾಸ್‌ನ ಕೆಲವು ಸಲಿಂಗಕಾಮಿ ಉಗ್ರರು ಇಸ್ರೇಲಿ ಒತ್ತೆಯಾಳು ಪುರುಷರ ಮೇಲೆ ಅತ್ಯಾಚಾರವೆಸಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ “ನೈತಿಕ ನಿಯಮ”ಗಳನ್ನು ಉಲ್ಲಂಘಿಸಿರುವ ತನ್ನದೇ ಸದಸ್ಯರ ಹೆಸರುಗಳ ಪಟ್ಟಿ ತಯಾರಿಸಿದ್ದ ಹಮಾಸ್, ನಂತರ ಅವರಿಗೆ ಚಿತ್ರಹಿಂಸೆ ನೀಡಿ, ಮರಣದಂಡನೆ ವಿಧಿಸಿದ್ದರು. ನಿಯಮ ಪಾಲಿಸದ ಸದಸ್ಯರು ಭಾರೀ ಬೆಲೆ ತೆರಬೇಕಾಯಿತು ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಸುಮಾರು 94 ಮಂದಿ ಹಮಾಸ್ ಉಗ್ರರು ಇಂತಹ ಅಪರಾಧಗಳನ್ನು ಎಸಗಿದ್ದರು. ಸಲಿಂಗಕಾಮಕ್ಕೆ ಸಂಬಂಧಿಸಿದ ಸಂಭಾಷಣೆಗಳನ್ನು ನಡೆಸಿರುವುದು, ಲೈಂಗಿಕತೆ ಕುರಿತು ಚಾಟ್ ಮಾಡಿರುವುದು, ಕಾನೂನಾತ್ಮಕ ಸಂಬಂಧ ಇಲ್ಲದ ಮಹಿಳೆಯರೊಂದಿಗೆ ಲಲ್ಲೆ ಹೊಡೆಯುವುದು ಮುಂತಾದವುಗಳನ್ನೂ ಅಪರಾಧವೆಂದು ಪರಿಗಣಿಸಿ, ಸದಸ್ಯರಿಗೆ ಶಿಕ್ಷಿಸಲಾಗಿದೆ. ಒತ್ತೆಯಾಳು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಮಗುವೊಂದರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನೂ ಹಮಾಸ್ ಗಲ್ಲಿಗೇರಿಸಿದೆ ಎಂದು ರಹಸ್ಯ ದಾಖಲೆಗಳು ತಿಳಿಸಿವೆ.
ಗಾಜಾದಲ್ಲಿ ಸಲಿಂಗಕಾಮವನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗಿದೆ. ಈ ಅಪರಾಧ ಎಸಗಿದವರಿಗೆ ಅಲ್ಲಿ ಹಲವು ವರ್ಷಗಳ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ. ಹಮಾಸ್‌ನ ಮಾಜಿ ಕಮಾಂಡರ್ ಸಲಿಂಗ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ 2016ರಲ್ಲಿ ಆತನ ಎದೆಗೆ 3 ಗುಂಡುಗಳನ್ನು ಹಾರಿಸಿ, ಕೊಲ್ಲಲಾಗಿತ್ತು. ಅದಕ್ಕೂ ಮುನ್ನ ಒಂದು ವರ್ಷ ಕಾಲ ಆತನನ್ನು ನೇತು ಹಾಕಿ ಹಿಂಸಿಸಲಾಗಿತ್ತು.