ರಾಮನಗರ: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಮಧ್ಯೆ ಕಾಂಗ್ರೆಸ್ ಪಾಳಯದ ಹಲವರು ಬಹಿರಂಗವಾಗಿ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರೂ ಒಳಗೊಳಗೆ ಖುಷಿ ಪಡುವಂತಿದೆ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಏಕೆಂದರೆ, ಹಲವಾರು ನಾಯಕರು ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಡಿಕೆಶಿ ಕೂಡ ಮುಂಚೂಣಿಯಲ್ಲಿದ್ದಾರೆ. ಈಗ ಅವರು ಮಾತು ಈ ವಿಷಯವನ್ನು ಸತ್ಯ ಮಾಡುತ್ತಿದೆ.
ಕನಕಪುರದಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಾನು ರಾಜ್ಯದ ಸೇವೆ ಮಾಡಬೇಕೆಂದು ದೊಡ್ಡ ಪ್ರಯತ್ನ, ಹೋರಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗುತ್ತಿದೆ. ನಿಮ್ಮ ತಂದೆ-ತಾಯಂದಿರು ನನಗೆ ಸಹಾಯ ಮಾಡಿದ್ದಾರೆ. ಬೆಳೆಸಿದ್ದಾರೆ. ಹರಸಿದ್ದಾರೆ. ಸಹಕಾರ ಕೊಟ್ಟಿದ್ದಾರೆ. ನಾನು ರಾಜ್ಯದ ಸೇವೆ ಮಾಡಬೇಕೆಂದು ದೊಡ್ಡ ಪ್ರಯತ್ನ – ಹೋರಾಟ ನಡೆಯುತ್ತಿದೆ. ಈಗ ಹೇಳಿದರೆ ಮಾಧ್ಯಮದವರು ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಯಾರು ಏನು ಬೇಕಾದರೂ ಬಿಂಬಿಸಲಿ. ನಾನು ಡಿಸಿಎಂ ಆಗಿ ಬಂದಿಲ್ಲ, ಒಬ್ಬ ಶಾಸಕ, ನಿಮ್ಮ ಸೇವಕನಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.
ಆನಂತರ ಯೂಟರ್ನ್ ಹೊಡೆದ ಅವರು, ನಾನು ಆ ರೀತಿ ಹೇಳಿಲ್ಲ. ನೀವೆಲ್ಲ ಸೇವೆ ಮಾಡೋಕೆ ಅವಕಾಶ ಕೊಡಿ ಎಂದಿದ್ದೇನೆ ಅಷ್ಟೇ. ನೀವು ಆ ರೀತಿ ಕಲ್ಪನೆ, ಸೃಷ್ಟಿ ಮಾಡೋದು ಬೇಡ. ನಾನು ಡಿಸಿಎಂ ಆಗಿ ರಾಜ್ಯದ ಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ.
ನಾನು ದಾಖಲೆ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಸರ್ಕಾರ 7 ಮಂತ್ರಿಗಳು ರಾಜಿನಾಮೆ ಕೊಡೇಕಾಗುತ್ತೆ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.