ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ ಎಂಬುವುದಕ್ಕೆ ಹಲವು ಸಾಕ್ಷಿಗಳು ಪುಷ್ಟಿ ನೀಡುತ್ತಿವೆ. ರೌಡಿಗಳೊಂದಿಗೆ ಕುಳಿತು, ಕಾಫಿ ಸೇವಿಸುತ್ತ, ಕೈಯಲ್ಲಿ ಸಿಗರೇಟು ಹಿಡಿದಿರುವ ದರ್ಶನ್ ಫೋಟೋ ವೈರಲ್ ಆಗಿದೆ. ಇದರ ಮಧ್ಯೆ ವಿಡಿಯೋ ಕಾಲ್ ಮಾಡಿ ಆಪ್ತನೊಂದಿಗೆ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
ಈಗ ದರ್ಶನ್ ಜೈಲಿನಲ್ಲಿದ್ದುಕೊಂಡೇ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕಾಲ್ ಮಾಡಿಸಿದ್ದು, ರೌಡಿಶೀಟರ್ ಧರ್ಮ ಎಂಬುವುದು ಬಹಿರಂಗವಾಗಿದೆ. ಈತ ಬಾಣಸವಾಡಿ ರೌಡಿಶೀಟರ್ ಧರ್ಮ ಎನ್ನುವವನು ಎನ್ನಲಾಗಿದೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ಮೇ 7ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಈ ರೌಡಿಶೀಟರ್ ಧರ್ಮ ಕೂಡ ಭಾಗಿಯಾಗಿದ್ದ. ಧರ್ಮನನ್ನು ಬಂಧಿಸಿ, ಪೊಲೀಸರು ಜೈಲಿಗೆ ಅಟ್ಟಿದ್ದರು. ಈಗ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದರೂ ಅಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ದರ್ಶನ್ ಗೆ ಅಭಿಮಾನಿಯೂ ಆಗಿರುವ ಧರ್ಮ ಜೈಲಿನಲ್ಲಿ ಪರಿಚಿತನಾಗಿದ್ದಾನೆ.
ದರ್ಶನ್ ಕೂಡ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್ ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ಈ ಪೈಕಿ ಧರ್ಮ ಕೂಡ ಇರಬಹುದು. ದರ್ಶನ್ ಪರಿಚಯವನ್ನು ತೀರಾ ಸಲುಗೆಗೆ ತೆಗೆದುಕೊಂಡ ರೌಡಿಶೀಟರ್ ಧರ್ಮ ಜೈಲಿನಲ್ಲಿ ತನ್ನ ಆಪ್ತನಿಗೆ ಇನ್ ಸ್ಟಾಗ್ರಾಮ್ ಮೂಲಕ ವಿಡಿಯೀ ಕರೆ ಮಾಡಿ ಮಾತನಾಡಿದ್ದಾನೆ. ನಂತರ, ತನ್ನ ಬಳಿ ನಟ ದರ್ಶನ್ ಕೂಡ ಇದ್ದಾನೆ ಮಾತನಾಡು ಎಂದು ಹೇಳಿ, ಅವರ ಕಡೆಯಿಂದಲೂ ಮಾತನಾಡಿಸಿದ್ದಾನೆ.
ಆದರೆ, ದರ್ಶನ್ ರೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ರೌಡಿಶೀಟರ್ ಧರ್ಮನ ಆಪ್ತನು ವಿಡಿಯೋ ಕಾಲ್ ನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಅದನ್ನು ಸ್ಟೇಟಸ್ ಹಾಕಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಟೇಟಸ್ ಡಿಲೀಟ್ ಮಾಡಿದ್ದಾನೆ. ಆದರೆ, ಅದು ಈಗ ವೈರಲ್ ಆಗಿದೆ.