ಹುಬ್ಬಳ್ಳಿ | ಯುವಕನೋರ್ವನ ಸಾವಿಗೆ ಕಿಮ್ಸ್ ಸಿಬ್ಬಂದಿಯ ಬೇಜವಾಬ್ದಾರಿತನ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಧಾರವಾಡದ ಮೊರಬ ಗ್ರಾಮದ ನಿವಾಸಿ ಪ್ರಕಾಶ್ (25) ಇವರು ಜೆಸಿಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ್ 13ರಂದು ಕೆಲಸ ಮುಗಿಸಿ ಬೈಕ್ನಲ್ಲಿ ತಮ್ಮೂರಿಗೆ ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ಅವರ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಕಾರಣ ಆತ ಬ್ರೈನ್ ಡೆಡ್ ಆಗಿ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆ್ಯಂಬುಲೆನ್ಸ್ ಮೂಲಕ ಕೂಡಲೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ ರಾತ್ರಿಯೇ ಪ್ರಕಾಶ್ರನ್ನು ಕಿಮ್ಸ್ಗೆ ಕರೆತರಲಾಗಿತ್ತು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರೂ ಕನಿಷ್ಠ ಚಿಕಿತ್ಸೆಯನ್ನೂ ನೀಡಿಲ್ಲ. ಬೆಡ್ ಇಲ್ಲವೆಂಬ ಕಾರಣ ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಇನ್ನು, ಆ್ಯಂಬುಲೆನ್ಸ್ನಿಂದ ಗಾಯಾಳುವನ್ನು ಕೆಳಗಿಳಿಸಲೂ ಸಿಬ್ಬಂದಿ ಬಾರದ ಕಾರಣ, ಅರ್ಧಗಂಟೆಗೂ ಹೆಚ್ಚು ಕಾದು ಬಳಿಕ ಅನಿವಾರ್ಯವಾಗಿ ಪ್ರಕಾಶ್ರನ್ನು ಮತ್ತೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅಷ್ಟರೊಳಗಾಗಿ ಅವರ ಬ್ರೈನ್ ಡೆಡ್ ಆಗಿದೆ. ಹೀಗಾಗಿ ಮರಳಿ ಮತ್ತೆ ಕಿಮ್ಸ್ಗೆ ಕರೆತರಲಾಗಿತ್ತಾದರೂ ಗಾಯಾಳು ಮಾತ್ರ ಬದುಕುಳಿಯಲಿಲ್ಲ. ಧಾರವಾಡ ಜಿಲ್ಲಾ ಆಸ್ಪತ್ರೆಯಿದ ಹುಬ್ಬಳ್ಳಿ ಕಿಮ್ಸ್, ಹುಬ್ಬಳ್ಳಿ ಕಿಮ್ಸ್ನಿಂದ ಧಾರವಾಡ ಖಾಸಗಿ ಆಸ್ಪತ್ರೆ ಓಡಾಟದಲ್ಲಿಯೇ ಎರಡು ಗಂಟೆಗೂ ಹೆಚ್ಚು ಸಮಯ ಹೋಗಿದ್ದರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪ್ರಕಾಶ್ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ್ನಲ್ಲಿಯೇ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಪ್ರಕಾಶ್ ಬದುಕುಳಿಯುತ್ತಿದ್ದರು. ಇಲ್ಲಿನ ಸಿಬ್ಬಂದಿ ಆತನನ್ನು ಬಲಿ ಪಡೆದಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಹಿಳೆಯ ಮೇಲೆ ಮೂತ್ರ ವಿಸರ್ಜನೆ.. ವ್ಯಕ್ತಿಯನ್ನು ಹೊಡೆದು ಕೊಂದ ಉದ್ರಿಕ್ತರ ಗುಂಪು!



















