ರಾಜ್‌ಕೋಟ್: ವಿದರ್ಭ ತಂಡದ ಸ್ಟಾರ್ ಬ್ಯಾಟರ್ ಧ್ರುವ ಶೋರೆ ದೇಶೀಯ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಶುಕ್ರವಾರ ಹೈದರಾಬಾದ್ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದ ಶೋರೆ, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಸತತ ಐದು ಶತಕಗಳನ್ನು ಬಾರಿಸಿದ ಎನ್. ಜಗದೀಶನ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಸತತ ಶತಕಗಳ ದಾಖಲೆ ಬರೆದ ಜಗತ್ತಿನ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೈದರಾಬಾದ್ ವಿರುದ್ಧ ಸ್ಫೋಟಕ ಬ್ಯಾಟಿಂಗ್
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧ್ರುವ ಶೋರೆ ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 77 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 109 ರನ್ ಗಳಿಸಿದರು. ಆರಂಭಿಕರಾದ ಅಮನ್ ಮೊಖಾಡೆ (82) ಮತ್ತು ಯಶ್ ರಾಥೋಡ್ (68) ಮೊದಲ ವಿಕೆಟ್‌ಗೆ 148 ರನ್‌ಗಳ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿದ್ದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಶೋರೆ, ಸಮರ್ಥ್ ಆರ್ (63) ಅವರೊಂದಿಗೆ ಮೂರನೇ ವಿಕೆಟ್‌ಗೆ 140 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು 365ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜಗದೀಶನ್ ದಾಖಲೆ ಸಮಬಲ
ತಮಿಳುನಾಡಿನ ಎನ್. ಜಗದೀಶನ್ ಅವರು 2022-23ರ ಸಾಲಿನಲ್ಲಿ ಸತತ ಐದು ಶತಕಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಈಗ ಧ್ರುವ ಶೋರೆ ಅದೇ ಮೈಲುಗಲ್ಲನ್ನು ತಲುಪಿದ್ದಾರೆ. ಶೋರೆ ಅವರ ಈ ಶತಕಗಳ ಸರಣಿಯು ಕಳೆದ 2024-25ರ ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತಗಳಿಂದ ಆರಂಭವಾಗಿತ್ತು. ಕಳೆದ ಸೀಸನ್‌ನ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಶತಕ ಬಾರಿಸಿದ್ದ ಶೋರೆ, ಈ ವರ್ಷದ ಮೊದಲ ಪಂದ್ಯದಲ್ಲಿ ಬಂಗಾಳ ವಿರುದ್ಧ 136 ರನ್ ಗಳಿಸಿದ್ದರು. ಇಂದು ಹೈದರಾಬಾದ್ ವಿರುದ್ಧ ಅಜೇಯ 109 ರನ್ ಗಳಿಸುವ ಮೂಲಕ ಐದನೇ ಶತಕವನ್ನು ಪೂರೈಸಿದ್ದಾರೆ.
ದಿಗ್ಗಜರನ್ನು ಹಿಂದಿಕ್ಕಿದ ವಿದರ್ಭ ತಾರೆ
ಸತತ ಶತಕಗಳ ದಾಖಲೆಯಲ್ಲಿ ಧ್ರುವ ಶೋರೆ ಈಗ ಕುಮಾರ್ ಸಂಗಕ್ಕಾರ, ದೇವದತ್ ಪಡಿಕ್ಕಲ್, ಕರುಣ್ ನಾಯರ್ ಮತ್ತು ಅಲ್ವಿರೋ ಪೀಟರ್‌ಸನ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿದ್ದಾರೆ. ಈ ನಾಲ್ವರು ಆಟಗಾರರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ್ದರು. ಕಳೆದ ಸೀಸನ್‌ನಲ್ಲಿ ವಿದರ್ಭ ತಂಡದ ರನ್ ಮಷೀನ್ ಆಗಿ ಹೊರಹೊಮ್ಮಿದ್ದ ಶೋರೆ, ಎಂಟು ಇನಿಂಗ್ಸ್‌ಗಳಿಂದ 70.47ರ ಸರಾಸರಿಯಲ್ಲಿ 494 ರನ್ ಗಳಿಸಿದ್ದರು. ಇದೀಗ ಪ್ರಸ್ತುತ ಸೀಸನ್‌ನಲ್ಲಿಯೂ ತಮ್ಮ ಫಾರ್ಮ್ ಮುಂದುವರಿಸಿರುವ ಅವರು, ಮುಂದಿನ ಪಂದ್ಯದಲ್ಲಿಯೂ ಶತಕ ಬಾರಿಸಿದರೆ ಸತತ ಆರು ಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎಂಬ ವಿಶ್ವದಾಖಲೆ ಬರೆಯಲಿದ್ದಾರೆ.
ಇದನ್ನೂ ಓದಿ : ಬ್ಯಾಟಿಂಗ್‌ನಲ್ಲಿ ‘ಶೂನ್ಯ’ ಸುತ್ತಿದ್ದರೂ ಫೀಲ್ಡಿಂಗ್‌ನಲ್ಲಿ ರೋಹಿತ್ ಮ್ಯಾಜಿಕ್ ; ವಿಡಿಯೊ ಸಖತ್ ವೈರಲ್!



















