ಬೆಂಗಳೂರು: ಕಳೆದ ಆರೇಳು ಐಪಿಎಲ್ ಸೀಸನ್ ಗಳಿಂದಲೂ ಧೋನಿ ನಿವೃತ್ತಿಯ ವಿಷಯ ಸದ್ದು ಮಾಡುತ್ತಲೇ ಇದೆ. ಆದರೂ ಧೋನಿ ಹಳದಿ ಜೆರ್ಸಿ ತೊಡುವುದನ್ನು ಬಿಟ್ಟಿಲ್ಲ. ಈ ವರ್ಷ ಅವರು ಕಣಕ್ಕೆ ಇಳಿಯುವುದೇ ಅಸಾಧ್ಯ ಎಂದು ಹಲವರು ಕಳೆದ ಬಾರಿಯ ಐಪಿಎಲ್ ನಲ್ಲಿಯೇ ಹೇಳಿದ್ದರು. ಆದರೆ, ಅವರ ಊಹೆಯನ್ನು ಕೂಡ ಧೋನಿ ಸುಳ್ಳು ಮಾಡಿದ್ದರು. ಹೀಗಾಗಿ ಈ ಬಾರಿಯ ಚರ್ಚೆ ಶುರುವಾಗಿದೆ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ 42 ವರ್ಷದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ ಸೇವೆ ಮುಂದುವರಿಸಿದ್ದಾರೆ. 2025ರ ಐಪಿಎಲ್ ನಲ್ಲಿ ಕೂಡ ಕಣಕ್ಕೆ ಇಳಿಯಬಹುದು ಎನ್ನಲಾಗುತ್ತಿದೆ.

ಐಪಿಎಲ್ 2025 ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೆಗಾ ಆಕ್ಷನ್ ಆಯೋಜಿಸಲಿದೆ. 10 ತಂಡಗಲು 4 ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಡಬೇಕು. ಇತ್ತೀಚೆಗೆ ತಂಡಗಳ ಮಾಲೀಕರು, ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ. ಅದು ಏನೇ ಆಗಲಿ ಧೋನಿ ಮಾತ್ರ ಚೆನ್ನೈ ತಂಡದಲ್ಲಿಯೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಮಂಡಿ ನೋವಿನ ಸಮಸ್ಯೆಯಿಂದಾಗಿ ಧೋನಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿಲ್ಲ. ಐಪಿಎಲ್ 2023 ಟೂರ್ನಿ ವೇಳೆ ಮಂಡಿ ನೋವಿದ್ದರೂ ಪಟ್ಟಿ ಧರಿಸಿ ಕಣಕ್ಕೆ ಇಳಿದಿದ್ದರು. ಅಲ್ಲದೆ ತಂಡಕ್ಕೆ ದಾಖಲೆಯ 5ನೇ ಟ್ರೋಫಿ ಗೆದ್ದುಕೊಟ್ಟಿದ್ದರು. ಐಪಿಎಲ್ 2024 ಟೂರ್ನಿಯಲ್ಲಿ ಕೂಡ ಅವರು ಕಾಣಿಸಿಕೊಂಡರು. ಸದ್ಯದ ಮಾಹಿತಿಯಂತೆ ಧೋನಿ ಇನ್ನೂ ಒಂದು ವರ್ಷ ಐಪಿಎಲ್ ಆಡಬಹುದು ಎನ್ನಲಾಗುತ್ತಿದೆ. ಆದರೆ, ಚೆನ್ನೈ ಫ್ರಾಂಚೈಸಿ ಈ ಬಾರಿ ತಾನು ಉಳಿಸಿಕೊಳ್ಳಲಿರುವ ಅಗ್ರ ನಾಲ್ಕು ಆಟಗಾರರ ಪಟ್ಟಿಯಲ್ಲಿ ಧೋನಿ ಇಲ್ಲ ಎನ್ನಲಾಗುತ್ತಿದೆ. ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ 5 ರಿಂದ 6ಕ್ಕೆ ಏರಿಕೆಯಾದರೆ ಮಾತ್ರ ಧೋನಿ ಮತ್ತೊಮ್ಮೆ ತಂಡದ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೂ ಧೋನಿ ನಿರ್ಧಾರ ಮಾತ್ರ ಇನ್ನೂ ಪ್ರಕಟವಾಗಿಲ್ಲ.