ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪದ್ಮಲತಾಳ ಸಹೋದರಿ ಇಂದು(ಸೋಮವಾರ) ಪದ್ಮಲತಾ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.
ಪದ್ಮಲತಾಳ ಅಕ್ಕ ಇಂದ್ರಾವತಿ ಅವರು ಸಿಪಿಐಎಂ ಪಕ್ಷದ ಮುಖಂಡರಾದ ಬಿ.ಎಂ ಭಟ್ ಹಾಗೂ ಇತರರೊಂದಿಗೆ ಎಸ್.ಐ.ಟಿ ಕಚೇರಿಗೆ ಆಗಮಿಸಿ, ಮರು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
“ಪದ್ಮಲತಾ ಕೇಸ್ : ಸಂಕ್ಷಿಪ್ತ ಮಾಹಿತಿ”
17 ವರ್ಷದ ಬಾಲಕಿ ಪದ್ಮಲತಾ ಸಿಪಿಐ(ಎಂ) ಕಾರ್ಯಕರ್ತ ದೇವಾನಂದ್ ಅವರ ಮಗಳು. 1987ರಲ್ಲಿ ಆಕೆಯನ್ನು ಅಪಹರಿಸಿ, 39 ದಿನಗಳ ಕಾಲಕೂಡಿ ಹಾಕಿ ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. 40ನೇ ದಿನ ಗೋಣಿಚೀಲದಲ್ಲಿ ತುಂಬಿದ ಆಕೆಯ ಮೃತದೇಹ ನೇತ್ರಾವತಿಯಲ್ಲಿ ಪತ್ತೆಯಾಗಿತ್ತು. ಈ ಕೃತ್ಯದ ವಿರುದ್ಧ ಹೋರಾಟಗಳು ನಡೆದವಾದರೂ, ಅಪರಾಧಿಗಳು ಪತ್ತೆಯಾಗಲಿಲ್ಲ. ದಿನ ಕಳೆದಂತೆ ಪ್ರಕರಣ ಮುಚ್ಚಿಯೇ ಹೋಯಿತು.
ಅಂದಹಾಗೆ, 1987ರಲ್ಲಿ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿತ್ತು. ಧರ್ಮಸ್ಥಳದಲ್ಲಿಯೂ ಚುನಾವಣೆ ನಡೆಯಬೇಕಿತ್ತು. ಆದರೆ, ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಗೆ, ನಿಖರವಾಗಿ ಹೇಳಬೇಕೆಂದರೆ ಧರ್ಮಸ್ಥಳ ಧರ್ಮಾಧಿಕಾರಿಗೆ ಚುನಾವಣೆ ನಡೆಸುವುದು ಇಷ್ಟವಿರಲಿಲ್ಲ. ಹಾಗಾಗಿ, ಧರ್ಮಸ್ಥಳ ಪಂಚಾಯತಿಯ ಸೀಟುಗಳನ್ನು ಅಲ್ಲಿ ಪ್ರಾಬಲ್ಯ ಹೊಂದಿದ್ದ ಪಕ್ಷಗಳಿಗೆ ಹಂಚಿಕೆ ಮಾಡಿ, ಅವಿರೋಧ ಆಯ್ಕೆ ಮಾಡಲು ಅವರು ಇಚ್ಛಿಸಿದ್ದರು ಎಂದು ಹೇಳಲಾಗಿದೆ.
ಧರ್ಮಸ್ಥಳದಲ್ಲಿ ಸಿಪಿಐ(ಎಂ)ನಿಂದ ಪದ್ಮಲತಾ ಅವರ ತಂದೆ ದೇವಾನಂದ್ ಕಣಕ್ಕಿಳಿದಿದ್ದರು. ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾರನೆ ದಿನವೇ ಪದ್ಮಲತಾ ನಾಪತ್ತೆಯಾದರು. 40 ದಿನಗಳ ನಂತರ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರಗೈದು, ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.