ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವುದರ ನಡುವೆ ರಾಜಕೀಯ ವಾಗ್ವಾದಗಳು ನಡೆಯುತ್ತಿವೆ.
ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಸದನದ ಒಳಗೂ, ಹೊರಗೂ ಮುಗಿಬಿದ್ದಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಬಿಜೆಪಿ ʼಧರ್ಮಸ್ಥಳ ಚಲೋʼ ಬೃಹತ್ ಕಾರ್ ಜಾಥಾ ನಡೆಸಿದೆ.
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಧರ್ಮಸ್ಥಳದ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಧರ್ಮಸ್ಥಳದ ಬಗ್ಗೆ ಹೀಗೆ ಆರೋಪ ಮಾಡುತ್ತಿರುವವರಲ್ಲಿ ಒಬ್ಬ “ಸಿಎಂ ಸಿದ್ದರಾಮಯ್ಯ ಅವರನ್ನೇ ಕೊಲೆಗಾರ” ಅಂದಿದ್ದಾನೆ ಎಂದು ಕಿಡಿಕಾರಿದ್ದಾರೆ.
ಎಸ್ಐಟಿ ರಚನೆಯಾದ ಬಳಿಕ ಏನು ಮಾತಾಡದೆ ಸುಮ್ಮನಿದ್ದ ಬಿಜೆಪಿ ನಾಯಕರು ಈಗ ಮಾತನಾಡುತ್ತಿದ್ದಾರೆ. ಈಗ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ. ಬಿಜೆಪಿಯ ನಾಯಕರೆಲ್ಲಾ ಹಿಂದುತ್ವ ತಮ್ಮ ಮನೆ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಅದು ಯಾರ ಆಸ್ತಿಯೂ ಅಲ್ಲ. ಅವರವರ ಭಕ್ತಿ, ನಂಬಿಕೆ ಎಂದು ಹೇಳಿದ್ದಾರೆ.
ಬಿಜೆಪಿಯವರಿಗೆ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುವುದೇ ಮುಖ್ಯ. ಎಸ್.ಐ.ಟಿ ರಚನೆ ಮಾಡಿದಾಗ, ಬಿಜೆಪಿ ನಾಯಕರು ಒಬ್ಬರೂ ಈ ಪ್ರಶ್ನಿಸಿಲ್ಲ. ಅವರಿಗೆ ಧರ್ಮಸ್ಥಳದ ಬಗ್ಗೆ ಪ್ರೀತಿ, ಗೌರವವಿಲ್ಲ. ಈಗ ಧರ್ಮಸ್ಥಳದ ವಿಷಯದಲ್ಲೂ ರಾಜಕಾರಣ ಮಾಡಲು ಧರ್ಮಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.