ಧರ್ಮಸ್ಥಳ : ಧರ್ಮಸ್ಥಳದ ಕ್ಷೇತ್ರ ಮತ್ತು ಕ್ಷೇತ್ರದ ಧರ್ಮಾಧಿಕಾರಿಗಳ ವಿರುದ್ಧ ಅವ್ಯಾಹತವಾಗಿ ಷಡ್ಯಂತ್ರ ಹಾಗೂ ಅಪಪ್ರಚಾರ ಮಾಡಲಾಗುತ್ತಿದ್ದು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ರಾಜ್ಯ ಬಿಜೆಪಿ ಒಕ್ಕೊರಲಿನಿಂದ ಆಗ್ರಹ ಮಾಡಿದೆ.
ಇಂದು (ಸೋಮವಾರ) ಧರ್ಮಸ್ಥಳದಲ್ಲಿ ರಾಜ್ಯ ಬಿಜೆಪಿ ಧರ್ಮಸ್ಥಳದಲ್ಲಿ ಆಯೋಜಿಸಿದ ” ಧರ್ಮಸ್ಥಳ ಚಲೋ” ಮತ್ತು ಧರ್ಮಸ್ಥಳದಲ್ಲಿ ಧರ್ಮಯಾತ್ರೆ ಬೃಹತ್ ಸಮಾವೇಶದಲ್ಲಿ ರಾಜ್ಯ ಬಿಜೆಪಿ ನಾಯಕರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಧರ್ಮಸ್ಥಳ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಆದೇಶಿಸಿದಾಗ ನಾವು ಸ್ವಾಗತಿಸಿದ್ದೆವು. ಆದರೆ ಧರ್ಮಸ್ಥಳದಂತಹ ಪುಣ್ಯಕ್ಷೇತ್ರದ ವಿರುದ್ಧ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿದ್ದರೂ, ಸರ್ಕಾರ ಅಪಪ್ರಚಾರ ಹಾಗೂ ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಈ ಆರೋಪಗಳ ಹಿಂದೆ ‘ಬಹಳ ದೊಡ್ಡ ಪಿತೂರಿ’ ಇದೆ. ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರವನ್ನು ಮಟ್ಟ ಹಾಕಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಿಲ್ಲ. ಎಲ್ಲವನ್ನೂ ಬಹಿರಂಗಪಡಿಸಬೇಕಾಗಿದ್ದು, ಹೀಗಾಗಿ ಪ್ರಕರಣವನ್ನು ಸಿಬಿಐ ಅಥವಾ ಎನ್‌ಐಎ ತನಿಖೆಗೆ ವಹಿಸಬೇಕು ಇದು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎಲ್ಲಾ ಭಕ್ತರ ಬೇಡಿಕೆ” ಎಂದು ಆಗ್ರಹಿಸಿದ್ದಾರೆ.
“ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯ ಸಮಯದಲ್ಲಿ ಬಹಳಷ್ಟು ಸುಳ್ಳು ಪ್ರಚಾರ ನಡೆಸಲಾಯಿತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಪ್ರಚಾರ ನಡೆದ ರೀತಿಗೆ ಕೋಟ್ಯಂತರ ಭಕ್ತರು ಅಸಮಾಧಾನಗೊಂಡಿದ್ದಾರೆ. ಭಕ್ತರ ಭಾವನೆಗಳಿಗೆ ತೀವ್ರ ನೋವುಂಟಾಗಿದೆ,” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಸದನದಲ್ಲೂ ಬಿಜೆಪಿ ಎಸ್‌ಐಟಿ ತನಿಖೆಯ ಮಧ್ಯಂತರ ವರದಿ ಕೇಳಿತ್ತು, ನೀಡಿದ್ದರೆ ಅದರಲ್ಲೇ ಸತ್ಯ ಮನದಟ್ಟಾಗುತ್ತಿತ್ತು. ಇಲ್ಲಿ ಗುಪ್ತಚರ ಇಲಾಖೆಯ, ಮುಖ್ಯಮಂತ್ರಿಗಳ ವೈಫಲ್ಯವಿದೆ. ಪ್ರಕರಣದಲ್ಲಿ ಸತ್ಯಾಸತ್ಯತೆ ತಿಳಿಯುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ, ಹೀಗಾಗಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ‘ಸತ್ಯದ ಬಾಗಿಲು ತೆರೆಯುವುದಿಲ್ಲ’ ಎನ್ನುವುದು ನಿಶ್ಚಿತ, ಈ ನಿಟ್ಟಿನಲ್ಲಿ ಎನ್.ಐ.ಎ ಅಥವಾ ಸಿಬಿಐ ತನಿಖೆಯಿಂದ ಮಾತ್ರ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರಕ್ಕೆ ಶಾಶ್ವತ ಉತ್ತರ ದೊರಕಿಸಿಕೊಡಲು ಸಾಧ್ಯ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ಜಗದೀಶ್ ಶೆಟ್ಟರ್, ಡಾ. ಅಶ್ವಥ್ ನಾರಾಯಣ್, ಸಂಸದರಾದ ಡಾ. ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ ವಿಶ್ವೇಶ್ವರ ಹೆಗಡೆ ಕಾಗೇರಿ,ಛಲವಾದಿ ನಾರಾಯಣಸ್ವಾಮಿ, ಸಿ.ಟಿ..ರವಿ, ಸುನಿಲ್ ಕುಮಾರ್, ನಳೀನ್ ಕುಮಾರ್ ಕಟೀಲ್, ಸೇರಿದಂತೆ ಶಾಸಕರು, ಮಾಜಿ ಶಾಸಕರು ಪಕ್ಷದ ಸಾವಿರಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ಪ್ರಮುಖರೊಂದಿಗೆ ಶಾಸಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ತಂಡ ಸೌಜನ್ಯ ಮನೆಗೆ ಭೇಟಿ ನೀಡಿ, ಸೌಜನ್ಯಳ ತಾಯಿ ಕುಸುಮಾವತಿ ಅವರಿಗೆ ಬೆಂಬಲ ಸೂಚಿಸಿದರು.
