ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರ ಹಾಗೂ ಅನನ್ಯಾ ಭಟ್ ಕೊಲೆ ನಡೆಸಿರುವ ವಿಚಾರದ ಬಗ್ಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ವಿಡಿಯೋ ಮಾಡಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್.ಎಮ್.ಡಿ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಆತ ಇಂದು(ಆ.24, ರವಿವಾರ) ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ.
ಸಮೀರ್ ತನ್ನ ವಕೀಲರೊಂದಿಗೆ ಮಧ್ಯಾಹ್ನ 1 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದ ಬಗ್ಗೆ ದೂರುದಾರನ ಮಾಹಿತಿ ರಿವಿಲ್ ಮಾಡಿದ್ದು, ಕಾಲ್ಪನಿಕ ಮಾಹಿತಿಗಳನ್ನು ಮಾಡಿ ತನ್ನ “ದೂತ” ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಸಮೀರ್ ಎಮ್.ಡಿ ವಿಡಿಯೋ ಪ್ರಸಾರ ಮಾಡಿದ ಬಗ್ಗೆ ಜು.12 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಇರುವ ಕಾರಣ ಆ.21 ರಂದು ಧರ್ಮಸ್ಥಳ ಪೊಲೀಸರು ಬೆಂಗಳೂರು ಬಾಡಿಗೆ ಮನೆಯಿಂದ ಬಂಧಿಸಲು ತೆರಳಿದ್ದು, ಈ ವೇಳೆಗೆ ಸಂಜೆ ಮಂಗಳೂರು ಕೋರ್ಟ್ ನಿಂದ ಆ.21 ರಂದು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ.
ಪೊಲೀಸರ ವಿಚಾರಣೆಗೆ ಹಾಜರಾಗಬೇಕು, ಸಾಕ್ಷಿ ನಾಶ ಮಾಡಬಾರದೆಂದು ಕೋರ್ಟ್ ಷರತ್ತು ವಿಧಿಸಿದ್ದು, ಅದರಂತೆ ಧರ್ಮಸ್ಥಳ ಪೊಲೀಸರ ವಿಚಾರಣೆ ಬಾಕಿ ಇರುವ ಕಾರಣದಿಂದ ಆ.22 ರಂದು ಮತ್ತೆ ಸಮೀರ್. ಎಮ್.ಡಿ ಗೆ ವಿಚಾರಣೆಗೆ ಆ.23 ರಂದು 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆ ಎದುರಿಸಲು ನೋಟಿಸ್ ಜಾರಿ ಮಾಡಿದ್ದರು.
ಯೂಟ್ಯೂಬರ್ ಸಮೀರ್ ಎಮ್.ಡಿಗೆ ಮಂಗಳೂರು ಕೋರ್ಟ್ ನಿಂದ ಜಾಮೀನು ಲಭಿಸಿದರೂ, ಧರ್ಮಸ್ಥಳ ಪೊಲೀಸರ ವಿಚಾರಣೆಗೆ ಹಾಜರಾಗದ ಹಿನ್ನಲೆ ಧರ್ಮಸ್ಥಳ ಪೊಲೀಸರು ಸಮೀರ್ ಎಮ್.ಡಿ ಕೋರ್ಟ್ ಗೆ ನೀಡಿದ ವಿಳಾಸಗಳಾದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಂಡಿಹಟ್ಟಿ ನಿವಾಸಕ್ಕೆ ಆ.22 ರಂದು ನೋಟಿಸ್ ನೀಡಲು ತೆರಳಿದಾಗ ಮನೆ ಬಾಗಿಲಿಗೆ ಬೀಗ ಹಾಕಿದ್ದು, ನಂತರ ನೋಟಿಸ್ ಮನೆಯ ಗೋಡೆಗೆ ಅಂಟಿಸಿ ಬಂದಿದ್ದರು.
ಅಷ್ಟಲ್ಲದೇ, ಧರ್ಮಸ್ಥಳ ಪೊಲೀಸರ ತಂಡ ಬೆಂಗಳೂರು ಜಿಗಣಿಯಲ್ಲಿರುವ ಹುಲ್ಲಹಳ್ಳಿಯಲ್ಲಿರುವ ಬಾಡಿಗೆ ಮನೆಗೆ ಹೋದಾಗ ಕೂಡ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು ಬಳಿಕ ಪೊಲೀಸರು ಗೋಡೆಗೆ ನೋಟಿಸ್ ಅಂಟಿಸಿದ್ದರು.
ಧರ್ಮಸ್ಥಳ ಪೊಲೀಸರು ಇ-ಮೇಲ್ ಹಾಗೂ ಮೊಬೈಲ್ ನಂಬರ್ ಗೆ ಸಂಪರ್ಕ ಮಾಡಿದ್ರೂ ಯಾವುದೇ ಉತ್ತರ ಬರುತ್ತಿರಲಿಲ್ಲ. ನೋಟಿಸ್ ನಲ್ಲಿ ಆ.24 ರಂದು ಭಾನುವಾರ ಧರ್ಮಸ್ಥಳ ಪೊಲೀಸ್ ಠಾಣೆ ಅಥವಾ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಕಚೇರಿಗೆ ತನಿಖೆಗೆ ಬರಲು ಸೂಚನೆ ನೀಡಿದ್ದರು. ಇವೆಲ್ಲಾ ಬೆಳವಣಿಗೆ ನಡುವೆ ಪೊಲೀಸ್ ಠಾಣೆಗೆ ಹಾಜರಾಗಲು ಮುಂದಾದ ಸಮೀರ್ ಎಂ.ಡಿ. ಇಂದು ಠಾಣೆಗೆ ಭೇಟಿ ಹಾಜರಾಗಿದ್ದಾರೆ.

(ವಕೀಲರೊಂದಿಗೆ ದಾಖಲೆಗಳ ಸಮೇತ ಬೆಳ್ತಂಗಡಿ ಠಾಣೆಗೆ ಹಾಜರಾದ ಸಮೀರ್ ಎಮ್.ಡಿ)


















