ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ ಮತ್ತು ಸುಜಾತಾ ಭಟ್ ಕುರಿತ ಸುಳ್ಳು ಪ್ರಕರಣಗಳ ವೀಡಿಯೋ ಮಾಡಿ ತನ್ನ ಖಾಸಗಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ನನ್ನು ಎಸ್.ಐ.ಟಿ ಅಧಿಕಾರಿಗಳು ನಿನ್ನೆ (ಸೆ.3, ಬುಧವಾರ) ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದಾರೆ.
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಸೆ.3 ರಂದು ಸಂಜೆ ವಿಚಾರಣೆಗೆ ದಾಖಲೆಗಳ ಜತೆ ಹಾಜರಾಗಿದ್ದ ಯೂಟ್ಯೂಬರ್ ಅ ಭಿಷೇಕ್ ಗೆ ಸೆ.4 ರ ಬೆಳಗ್ಗಿನ ಜಾವದವರೆಗೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ವಿಚಾರಣೆ ನಡೆಸಿದ್ದಾರೆ. ಎಸ್. ಐ.ಟಿ ವಶದಲ್ಲಿರುವ ಅಭಿಷೇಕ್ ಇಂದು (ಸೆ.04, ಗುರುವಾರ) ಕೂಡ ವಿಚಾರಣೆ ಎದುರಿಸಲಿದ್ದಾನೆ.
ಬುರುಡೆಗಾಗಿ ಜಯಂತ್ ಟಿ. ಜತೆ ಸೇರಿ ಅಭಿಷೇಕ್ ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಮಾತ್ರವಲ್ಲದೆ ಇದರ ವೀಡಿಯೋ ಚಿತ್ರೀಕರಣವನ್ನು ನಡೆಸಿದ್ದರು. ಈ ಹಿನ್ನೆಲೆ ಈತನ ವಿರುದ್ಧ ದೂರು ದಾಖಲಿಸಲಾಗಿತ್ತು. ಹಾಗಾಗಿ ಎಸ್.ಐ.ಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಸುಜಾತಾ ಭಟ್ ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ದೂರು ನೀಡಿದ ಕೆಲವು ದಿನಗಳ ನಂತರ ದೃಶ್ಯ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಕನ್ನಡ ಸುದ್ದಿ ವಾಹಿನಿಗಳು ಇದರ ಜಾಡು ಹಿಡಿದು ಪ್ರಕರಣ ಸುಳ್ಳು ಎಂದು ಒಪ್ಪಿಕೊಳ್ಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ತಂದಿತ್ತು. ಈ ವೇಳೆ ಅಭಿಷೇಕ್, ಸುಜಾತಾ ಭಟ್ ಮನೆಯಲ್ಲೇ ಇದ್ದು ಮತ್ತೆ ಇದೆಲ್ಲ ಸುಳ್ಳು ನನ್ನನ್ನು ಬಲತ್ಕಾರವಾಗಿ ಹೇಳಿಸಲಾಗಿದೆ ಎಂದು ಉಲ್ಟಾ ಹೊಡೆದಿದ್ದರು. ಈ ವಿಚಾರದಲ್ಲಿ ಮಹತ್ವದ ಸುಳಿವು ಲಭಿಸಿದೆ.
ಇದಲ್ಲದೆ, ಎಸ್‌ಐಟಿ ʼಸಾಕ್ಷಿ ದೂರುದಾರ ಆರೋಪಿʼ ಚಿನ್ನಯನನ್ನು ವಶಕ್ಕೆ ಪಡೆದ ನಂತರ ಚಿನ್ನಯ್ಯನ ಮುಸುಕಿಲ್ಲದ ಸಂದರ್ಶನ ಮಾಡಿದ ವೀಡಿಯೋ ಕೂಡ ಹರಿಬಿಡಲಾಗಿತ್ತು. ಇದರಲ್ಲಿ ಯೂಟ್ಯೂಬರ್ ಅಭಿಷೇಕ್ ಕೂಡ ಷಡ್ಯಂತ್ರದ ಭಾಗವೇ ಎನ್ನುವುದರ ವಿಚಾರವಾಗಿ ತೀವ್ರ ತನಿಖೆಗೆ ಒಳಪಡಿಸಿರುವ ಸಾಧ್ಯತೆಯಿದೆ ಎಂದು ಅಧಿಕೃತ ಸುದ್ದಿ ಮೂಲಗಳು ಮಾಹಿತಿ ನೀಡಿವೆ.