ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ಹೂತಿದ್ದಾಗಿ ಹೇಳಿದ ಅನಾಮಿಕ ಮುಸುಕುದಾರಿ ಚಿನ್ನಯ್ಯನ ಅಸಲಿ ಮುಖವನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಿಗೆ ಒದಗಿಸಲಾಗಿದ್ದ ಸಾಕ್ಷ್ಯ ಸಂರಕ್ಷಣಾ ಕಾಯ್ದೆ ರದ್ದು ಪಡಿಸಿದ ಬೆನ್ನಲ್ಲೇ ಎಸ್.ಐ.ಟಿ ಬಹಿರಂಗಗೊಳಿಸಿದೆ. ಆದರೆ, ಅದು 14 ವರ್ಷ ಹಳೆಯ ಫೋಟೋ ಆಗಿತ್ತು. ಇದೀಗ, ಮಾಸ್ಕ್ ಧರಿಸಿ ಓಡಾಡುತ್ತಿದ್ದ ಅಸಲಿ ಚಿನ್ನಯ್ಯನ ಈಗಿನ ಮುಖ ಹೇಗಿದೆ ಎಂಬ ಫೋಟೋ ಕೂಡ ಬಹಿರಂಗಗೊಳಿಸಿದೆ.
ಸರ್ಕಾರ ನಿಯೋಜನೆ ಮಾಡಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿನ್ನಯ್ಯನನ್ನು ಬಂಧನ ಮಾಡಿದ್ದು, ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರುಪಡಿಸಿದೆ. ಇಲ್ಲಿ ದೂರುದಾರನನ್ನು ವಿಚಾರಣೆ ಮಾಡುವುದಕ್ಕೆ ಎಸ್‌ಐಟಿ ವಶಕ್ಕೆ ಕೇಳುವ ಸಾಧ್ಯತೆಯಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಕ್ಯಾಮೇರಾದ ಮುಂದೆ ಚಿನ್ನಯ್ಯನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ನ್ಯಾಯಾಧೀಶ ವಿಜಯೇಂದ್ರ ಇ.ಹೆಚ್ ಎದುರು ಚಿನ್ನಯ್ಯ ಹೇಳಿಕೆ ನೀಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಕೇವಲ ಚಿನ್ನಯ್ಯ, ಜಡ್ಜ್ ಮತ್ತು ಸ್ಟೆನ್ನೋಗ್ರಾಪರ್ ಮಾತ್ರ ಇದ್ದಾರೆ ಎಂಬ ಮಾಹಿತಿಯೂ ಇದೆ. ಮುಸುಕು ತಗೆದು ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹಾಜರಾಗಿದ್ದು, ಹೇಳಿಕೆ ನೀಡುತ್ತಿದ್ದಾನೆ.
ಇನ್ನು, ಕಾನೂನು ನಿಯಮಾವಳಿಯಂತೆ ಬಂಧಿತ ಚಿನ್ನಯ್ಯನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಚಿನ್ನಯ್ಯನನ್ನು ಕೋರ್ಟ್ ಮೂಲಕ ವಶಕ್ಕೆ ಪಡೆದು ಕಠಿಣ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಚಿನ್ನಯ್ಯನ ಹಿಂದೆ ಇರುವವರು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಹಾಗೂ ಯೂಟೂಬರ್ ಸಮೀರ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಸುಜಾತಾ ಭಟ್ ಕೂಡ ಪಾತ್ರಧಾರಿ ಎಂಬ ಅನುಮಾನಗಳು ಮೂಡುತ್ತಿವೆ. ಮಾತ್ರವಲ್ಲದೇ, ಇವೆಲ್ಲದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿಯನ್ನು ಎಸ್‌ಐಟಿ ತನಿಖೆ ಮೂಲಕ ಹೊರಬರಬೇಕಿದೆ.