ಬೆಂಗಳೂರು: ‘ನ್ಯಾಯಾಲಯದ ಆದೇಶಗಳನ್ನು ಯಾಕೆ ಪದೆ ಪದೆ ಉಲ್ಲಂಘನೆ ಮಾಡುತ್ತಿದ್ದೀರಿ’ ಎಂದು ಯೂಟ್ಯೂಬರ್‌ಗಳನ್ನು ಪ್ರಶ್ನಿಸಿರುವ ಹೈಕೋರ್ಟ್, ‘ಪ್ರತಿಬಂಧಕ ಆದೇಶ ನೀಡಿದ ಮೇಲೂ ಒಂದರ ನಂತರ ಮತ್ತೊಂದು (ಯೂಟ್ಯೂಬ್) ಚಾನಲ್ ಆರಂಭಿಸುತ್ತಿರುವುದೇಕೆ’ ಎಂದು ಮೌಖಿಕವಾಗಿ ಪ್ರಶ್ನಿಸಿದೆ.
ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹೂಳಲಾಗಿದೆ’ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಅಥವಾ ಪ್ರಕಟ ಮಾಡಬಾರದು’ ಎಂದು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಮಂಗಳೂರಿನ ಕೋಡಿಬೈಲ್ ವಿಳಾಸ ಹೊಂದಿರುವ ಯೂಟ್ಯೂಬ್ ಚಾನಲ್ ‘ಕುಡ್ಲ ರಾಂಪೇಜ್’ ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ (32) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ‘ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ’ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಕುಡ್ಲ ರಾಂಪೇಜ್ ಪರ ಸುಪ್ರೀಂ ಕೋರ್ಟ್ ವಕೀಲ ಎ.ವೇಲನ್, ‘ಹರ್ಷೇಂದ್ರ ಕುಮಾರ್ ಅವರು ಮಾಧ್ಯಮಗಳ ವಿರುದ್ಧ ನಿರಂತರವಾಗಿ ಸಾಕಷ್ಟು ಪ್ರತಿಬಂಧಕ ಆದೇಶಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮಾನಹಾನಿಯ ಅಂಶಗಳನ್ನು ಪರಿಶೀಲನೆಗೆ ಒಳಪಡಿಸದೆಯೇ ಮಾಧ್ಯಮಗಳನ್ನು ನಿರ್ಬಂಧಿಸಿದೆ. ಹೀಗಾದರೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಗಳಿಗೆ ಅಡಿಗಲ್ಲಾಗಿರುವ ತನಿಖಾ ಪತ್ರಿಕೋದ್ಯಮದ ಪ್ರಶ್ನೆ ಏನಾಗಬೇಕು? ಮಾಧ್ಯಮಗಳ ವರದಿಯನ್ನೇ ಆಧರಿಸಿ ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ಕೊಲೆ ಮಾಡಿ ಹೂತಿರುವ ಶವಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ’ ಎಂದು ವಿವರಿಸಿದ್ದಾರೆ.
ಇದನ್ನು ಅಲ್ಲಗಳೆದ ಪ್ರತಿವಾದಿ ಹರ್ಷೇಂದ್ರ ಕುಮಾರ್ ಪರ ಪದಾಂಕಿತ ಹಿರಿಯ ವಕೀಲ ಉದಯ್ ಹೊಳ್ಳ, ‘ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿಯೇ ವಿಚಾರಣಾ ನ್ಯಾಯಾಲಯ ಮಾಧ್ಯಮಗಳನ್ನು ನಿರ್ಬಂಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಹೊರಡಿಸಿದೆ. ಸಂವಿಧಾನದ 21ನೇ ವಿಧಿಯ ಮತ್ತೊಂದು ಮುಖವೇ ವ್ಯಕ್ತಿಯೊಬ್ಬನ ಘನತೆಯ ಹಕ್ಕು. ಮಾನಹಾನಿ ಸಾವಿಗಿಂತಲೂ ಕನಿಷ್ಠ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಪುನರುಚ್ಚರಿಸಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಕೆಲಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ‘ಆಗಸ್ಟ್ 1ರಂದು ಆದೇಶ ಪ್ರಕಟಿಸಲು ಪ್ರಯತ್ನಿಸಲಾಗುವುದು’ ಎಂದು ಮೌಖಿಕವಾಗಿ ತಿಳಿಸಿದ್ದಾರೆ.