ಉಡುಪಿ: ಹಿಂದೂ ಸಮಾಜವನ್ನು ಒಡೆದು, ನಮ್ಮ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗಗುತ್ತಿದೆ. ಅದೇ ರೀತಿಯ ಪ್ರಯತ್ನ ಧರ್ಮಸ್ಥಳ ಕ್ಷೇತ್ರದಲ್ಲಿಯೂ ಆಗುತ್ತಿದೆ. ಇದೊಂದು ಅತ್ಯಂತ ಬೇಸರದ ಸಂಗತಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಶಪಾಲ್, ಕರಾವಳಿಯಲ್ಲಿ ದೈವ ದೇವರಾಧನೆಗೆ ಬಹಳಷ್ಟು ಮಹತ್ವ ಕೊಡುತ್ತೇವೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ನಾವೆಲ್ಲ ದೈವ ಭಕ್ತರು, ದಿನದಿತ್ಯ ದೇವರ ಆರಾಧನೆ ಮಾಡುತ್ತೇವೆ. ಕಮ್ಯುನಿಸ್ಟ್ ಮನಸ್ಥಿತಿ ಉಳ್ಳವರು ನಮ್ಮ ಧಾರ್ಮಿಕ ಕೇಂದ್ರಗಳು, ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಹಿಂದೂ ಸಮಾಜ ಸಂಘಟಿತವಾಗಿದೆ. ಇಂತಹ ಪ್ರಯೋಗ ಮಾಡಿದರೆ ಅವರಿಗೆ ಯಶಸ್ಸಾಗಲು ಸಾಧ್ಯವಿಲ್ಲ. ಇದರ ಹಿಂದೆ ಆರ್ಥಿಕವಾಗಿ ಸಹಾಯ ಮಾಡುವರು ಮತ್ತು ಛೂ ಬಿಟ್ಟು ಚಂದ ನೋಡುವರಿದ್ದಾರೆ ಎಂದಿದ್ದಾರೆ.
ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಮನವಿ ಕೊಟ್ಟಿದ್ದೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಿದರೆ ಇಲಾಖೆಗೆ ಮತ್ತು ಸರ್ಕಾರಕ್ಕೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಹಿಂದೂ ಸಮಾಜಕ್ಕೆ ಅನ್ಯಾಯ ಆದರೆ, ಹಿಂದುತ್ವಕ್ಕೆ ಧಕ್ಕೆ ಬಂದರೆ ಉಗ್ರ ಹೋರಾಟಕ್ಕೆ ಸಿದ್ಧ. ಕೊನೆ ಉಸಿರು ಇರುವ ತನಕ ಹಿಂದೂ ಸಮಾಜಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣದ ಹಿಂದೆ ಕಮ್ಯುನಿಸ್ಟ್, ಕೈವಾಡ ಇದೆ. ಕಮ್ಯುನಿಸ್ಟರು ಹಣಕಾಸಿನ ಸಹಾಯ ಮಾಡುತ್ತಿದ್ದಾರೆ. ಮೊದಲು ಹಣಕಾಸಿನ ಸಹಾಯ ಮಾಡುವರನ್ನು ತನಿಖೆ ಮಾಡಬೇಕು. ಎಸ್.ಐ.ಟಿ ತನಿಖೆಗೆ ಆಗ್ರಹಿಸಿದವರೆ ಇದೀಗ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವ ನಂಬಿಕೆ ಇಲ್ಲದಂತೆ ಕಾಣುತ್ತಿದೆ. ಮೊದಲು ಎಸ್.ಐ.ಟಿ ವರದಿ ಕೊಡಲಿ. ವರದಿಯ ಬಗ್ಗೆ ಅಪನಂಬಿಕೆ ಇದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ಅದನ್ನು ಬಿಟ್ಟು ತನಿಖೆಯ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.
ಕರಾವಳಿ ಭಾಗದ ಜನರು ಶ್ರೀ ಕ್ಷೇತ್ರದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಹಿಂದೂಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಇಂದು ಸಾಂಕೇತಿಕ ಹೋರಾಟ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.



















