ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಸಂದರ್ಭದಲ್ಲಿ, ಎಸ್‌ಐಟಿ (ವಿಶೇಷ ತನಿಖಾ ತಂಡ) ಇಂದು ಎರಡನೇ ದಿನದ ಉತ್ಖನನ ಕಾರ್ಯಾಚರಣೆ ನಡೆಸಿದೆ.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ತನಿಖೆಯಲ್ಲಿ ತಳುಕು ಹಾಕಿಕೊಂಡಿದೆ. ಅನಾಮಿಕ ಸಾಕ್ಷಿ ದೂರುದಾರ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ತನಿಖಾ ತಂಡದ ಮುಂದೆ ಹೇಳಿಕೊಂಡಿದ್ದಾನೆ. ಎಸ್‌ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು ಎನ್ನಲಾಗಿದೆ.
ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಸಂಬಂಧಿತ ಅಧಿಕಾರಿ ಈ ವಿಚಾರ ತಿಳಿದು ವಿಚಾರಣೆ ಭಯದಲ್ಲಿದ್ದು, ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಪ್ರಕರಣ ಸಂಬಂಧ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ತಲಾಶ್ ಪಟ್ಟಿಯನ್ನು, 1995 ರಿಂದ ಕೆಲಸ ಮಾಡಿದ ಎಲ್ಲಾ ಪೊಲೀಸರ ಪಟ್ಟಿಯನ್ನು ಎಸ್.ಐ.ಟಿ ಕೇಳಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಟ್ಟಿಗಾಗಿ ಎಸ್ಐಟಿ ಮನವಿ ಪತ್ರ ನೀಡಿದೆ.



















