ಬೆಂಗಳೂರು : ನಿನ್ನೆಯಷ್ಟೇ ಧರ್ಮಸ್ಥಳದ ಧರ್ಮಾಧಿಕಾರಿಗಳೊಂದಿಗೆ ಚರ್ಚಿಸಿ ಬಂದಿದ್ದೇವೆ. ನಮಗೆ ಮಾಹಿತಿ ಇರುವ ಪ್ರಕಾರ, ಸಾಕ್ಷಿ ದೂರುದಾರ ಸೂಚಿಸಿರುವ 16 ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ದೂರುದಾರನ ದೂರಿನಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲ. ಪಿತೂರಿ ನಡೆಸಿ ಧರ್ಮಸ್ಥಳದ ಬಗ್ಗೆ ಪೂರ್ವಯೋಜಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ. ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ರವಿ, ಡಿಸಿಎಂ ಹೇಳಿರುವ ಪ್ರಕಾರ ಷಡ್ಯಂತ್ರ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಪಪ್ರಚಾರ ನಡೆಸಿದವರ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಟಿ ರಮ್ಯಾ ದೂರಿನ ಮೇಲೆ ಕ್ರಮ ತೆಗೆದುಕೊಂಡಿದ್ದೀರಿ. ಕೋಟ್ಯಾಂತರ ಭಕ್ತರ ಭಾವನೆ ಇರುವ ಕ್ಷೇತ್ರದ ಬಗ್ಗೆ ಅಪ್ರಚಾರವಾಗುತ್ತಿದೆ ಎಂದು ಆರೋಪಿಸಿ ಕ್ರಮಕ್ಕೆ ಆಗ್ರಹಿಸುತ್ತಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಪ್ರಶ್ನಿಸಿದ್ದಲ್ಲದೇ, ಅಪಪ್ರಚಾರದ ವಿರುದ್ಧ ಕ್ರಮವಹಿಸಿ ಷಡ್ಯಂತ್ರ ನಡೆದಿಲ್ಲ ಎಂಬುದನ್ನು ನಿರೂಪಿಸಿ. ಎಡ ಪಂಥೀಯರ ಒತ್ತಾಯಕ್ಕೆ ಮಣಿದು ಎಸ್ಐಟಿ ರಚನೆ ಮಾಡಿದರೆ ಅದಕ್ಕಿಂತ ಅಪರಾಧ ಇನ್ನೊಂದಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದಿದ್ದಾರೆ.
ಇನ್ನು, ಸಿಎಂ ಕುರಿತಾಗಿ ಮಹೇಶ್ ತಿಮರೋಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿ, ಮಹೇಶ್ ತಿಮರೋಡಿ ಬಳಿ ಸಾಕ್ಷ್ಯಾಧಾರ ಇದ್ದರೆ ದೂರು ಸಲ್ಲಿಸಲಿ. ಆಧಾರವಿಲ್ಲದೇ ಮಾತಾಡುವುದು ಸರಿಯಲ್ಲ. ಆಧಾರವಿಲ್ಲದೇ ಆರೋಪ ಮಾಡಬಾರದು. ಸೂಕ್ತ ಸಾಕ್ಷ್ಯಾಧಾರ ಕೊಡದೇ ಇದ್ದರೆ ಆರೋಪ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಿಎಂ 24 ಕೊಲೆ ಮಾಡಿಸಿದ್ದಾರೆಂದು ತಿಮರೋಡಿಯವರಿಗೆ ಯಾವಾಗ ಜ್ಞಾನೋದಯ ಆಯಿತು? ಹಾಗಾದರೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಕೇಳಿದ್ದಲ್ಲದೇ, ಆಧಾರವಿಲ್ಲದೇ ಯಾರ ಮೇಲೂ ಆರೋಪ ಮಾಡಬಾರದು ಎಂದಿದ್ದಾರೆ.