ಮೈಸೂರು : ಧರ್ಮಸ್ಥಳ ಪ್ರಕರಣಕ್ಕೆ ಕಾನೂನಿನ್ವಯ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಎಸ್.ಐ.ಟಿ ರಚನೆ ಮಾಡುವ ಅವಶ್ಯಕತೆ ಬಂದರೆ ಖಂಡಿತ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಅವರು ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ೧೬೪ ಹೇಳಿಕೆಯನ್ನು ಸಾಕ್ಷಿ ವ್ಯಕ್ತಿ ನೀಡಿದ್ದಾನೆ. ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಒತ್ತಡ ತರುವ ಪ್ರಯತ್ನ ನಡೆಯುವುದಿಲ್ಲ. ಕಾನೂನಿನ ಪ್ರಕಾರವೇ ಈ ಪ್ರಕರಣದ ತನಿಖೆ ನಡೆಯುತ್ತದೆ ಎಂದವರು ಹೇಳಿದ್ದಾರೆ.

ಇನ್ನು, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಸಮಿತಿ ವರದಿ ಸಲ್ಲಿಸಿದೆ. ಅದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು. ವರದಿಯ ಪ್ರತಿಯನ್ನು ಎಲ್ಲಾ ಶಾಸಕರಿಗೆ, ಸಚಿವರಿಗೆ ನೀಡಿದ್ದೇವೆ. ಅವರೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆಯುವ ಸಾಧನಾ ಸಮಾವೇಶಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಜೆಪಿಯ ಆರೋಪಗಳಿಗೆಲ್ಲಾ ಪ್ರತಿಕ್ರಿಯಿಸುವುದಿಲ್ಲ. ಮೈಸೂರಿಗೆ ಬಿಜೆಪಿಯ ಕೊಡುಗೆ ಏನು ಎನ್ನುವುದನ್ನು ಹೇಳಲಿ. ಬಿಜೆಪಿಯವರಿಗೆ ಆರೋಪ ಮಾಡುವುದಷ್ಟೇ ಕೆಲಸವಾಗಿಬಿಟ್ಟಿದೆ ಎಂದು ಅವರು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದಲ್ಲಿ ಹಣವಿಲ್ಲ ಎಂದೆಲ್ಲಾ ಬಿಜೆಪಿಯವರು ಹೇಳುತ್ತಿದ್ದಾರೆ. ಹಣವಿಲ್ಲದೇ ಹೋಗಿದ್ದರೆ ೨೬೦೦ ಕೋಟಿಯ ಯೋಜನೆಗೆ ಹೇಗೆ ಚಾಲನೆ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಬಿಜೆಪಿ ಅವರು ಹೇಳಲಿ ಎಂದವರು ಹೇಳಿದ್ದಾರೆ.