ಧರ್ಮಸ್ಥಳ/ಉಜಿರೆ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ಸಾಕ್ಷಿ ದೂರುದಾರ ಇದೀಗ 13 ಸ್ಥಳಗಳನ್ನು ಗುರುತಿಸಿದ್ದು, ಇಂದಿನಿಂದ ಗುರುತು ಮಾಡಿರುವ ಸ್ಥಳದಿಂದ ಶವಗಳನ್ನು ಹೊರತೆಯುವ ಕಾರ್ಯ ಆರಂಭಿಸಲಾಗಿದೆ.
ನಿನ್ನೆ (ಸೋಮವಾರ) ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್‌ಐಟಿ ಮುಂದಾಗಿದೆ. ಅದಕ್ಕಾಗಿ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ. ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅಷ್ಟಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲಾ ಸಲಕರಣೆಗಳನ್ನು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇಂದಿನಿಂದ ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿ ಈಗಾಗಲೇ ಸಿಬ್ಬಂದಿಗಳು ಬಂದಿದ್ದು, 12 ಕಾರ್ಮಿಕರ ತಂಡ ಹಾರೆ, ಪಿಕಾಸಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ತಂದಿದ್ದಾರೆ. ಅಲ್ಲದೇ ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ 13 ಜಾಗಗಳನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳ ಸಮ್ಮುಖದಲ್ಲೇ ಗುರುತು ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಸಾಕ್ಷಿ ದೂರುದಾರನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದರು.
ನಂತ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನು ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿತ್ತು.
ನಿನ್ನೆ(ಸೋಮವಾರ) ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.



















