ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಕುರಿತು ದಾಖಲಾದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ ಇಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.
ಖಾಸಗಿ ಕಾರೊಂದರಲ್ಲಿ ಮೂವರು ವಕೀಲರೊಂದಿಗೆ ಇಲ್ಲಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಗೆ ಬೆಳಿಗ್ಗೆ 10.15ಕ್ಕೆ ಮುಖಗವಸು ಧರಿಸಿಕೊಂಡೇ ಬಂದ ಸಾಕ್ಷಿ ದೂರುದಾರ ಸಂಜೆ 6.22ರವರೆಗೂ ಅಲ್ಲೇ ಇದ್ದು ಎಸ್‌ಐಟಿ ತಂಡದ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪೊಲೀಸ್ ಅಧಿಕಾರಿಗಳು ಆತನಿಂದ ಹೇಳಿಕೆ ದಾಖಲಿಸಿಕೊಳ್ಳುವಾಗ ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಖುದ್ದು ಹಾಜರಿದ್ದರು. ಸಂಜೆ 5 ಗಂಟೆವರೆಗೂ ಪ್ರವಾಸಿ ಬಂಗಲೆಯಲ್ಲೇ ಇದ್ದ ಮೊಹಾಂತಿ ಮುಂದಿನ ತನಿಖೆಯ ಬಗ್ಗೆ ತಂಡದ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಎಸ್‌ಐಟಿಯಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅವರು ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ಹಾಜರಿದ್ದರು.