ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ನಡೆಯುತ್ತಿದ್ದು ಈ ನಡುವೆ ತಲೆ ಬುರಡೆಯನ್ನೇ ತಂದು ಕೋರ್ಟ್ ಮುಂದೆ ಹೇಳಿಕೆ ಕೊಟ್ಟ ಸಾಕ್ಷಿ ದೂರುದಾರನನ್ನು ತೀವ್ರ ವಿಚಾರಣೆಗೊಳಪಡಿಸುವುದಕ್ಕೆ ಎಸ್ಐಟಿ ಮುಂದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ, ಪರ ವಿರೋಧ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ವಿಪಕ್ಷಗಳು ಸದನದ ಒಳಗೂ, ಹೊರಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ಮಾತ್ರವಲ್ಲದೇ ಬಿಜೆಪಿ ಶಾಸಕರ ನಿಯೋಗ ಧರ್ಮಸ್ಥಳದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವನ್ನು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದೆ. ಈ ನಡುವೆ, ಸದ್ಯ ಉತ್ಖನನ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಸೂಚನೆ ನೀಡಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಮಾತ್ರವಲ್ಲದೇ, ಸಾಕ್ಷಿ ದೂರುದಾರ ಇನ್ನಷ್ಟು ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸುವಂತೆ ಪಟ್ಟು ಹಿಡಿದಿದ್ದಾನಂತೆ. ಆದರೆ, ಎಸ್ಐಟಿ ಸದ್ಯಕ್ಕೆ ಶೋಧ ಕಾರ್ಯ ನಡೆಸುವ ಚಿಂತನೆಗೆ ವಿರಾಮ ಹಾಕಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕಲೆ ಹಾಕಿರುವ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಲು ಎಸ್.ಐ.ಟಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.