ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಇದುವರೆಗೂ ಸಾಕ್ಷಿ ದೂರುದಾರ ನೀಡಿದ ದೂರಿನಂತೆ ಯಾವುದೇ ಮಹತ್ತರ ಬೆಳವಣಿಗೆ ನಡೆದಿಲ್ಲ. ಈವರೆಗೆ ಕೇವಲ ಎರಡು ಸ್ಥಳಗಳಲ್ಲಿ ಮಾನವ ಅಸ್ಥಿ ಅವಶೇಷಗಳು ಪತತೆಯಾಗಿವೆ. ವಿಪಕ್ಷಗಳು ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಅವಹೇಳನ ಮಾಡುವ ಕೆಲಸ ಈ ಮೂಲಕ ಆಗುತ್ತಿದೆ ಎಂದು ಸದನದ ಒಳಗೂ, ಹೊರಗೂ ಟೀಕೆ ಮಾಡುತ್ತಿವೆ. ಈ ನಡುವೆ ಎಸ್. ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದು, ಹಲವು ಪ್ರಶ್ನೆಗಳನ್ನೆಬ್ಬಿಸಿದೆ.
ಮುಂಗಾರು ಅಧಿವೇಶನ ನಡೆಯುತ್ತಿರುವ ನಡುವೆಯೇ ವಿಧಾನ ಸೌಧದಲ್ಲಿ ಪರಮೇಶ್ವರ್ ಭೇಟಿ ಮಾಡಿ ಪ್ರಣವ್ ಮೋಹಂತಿ ತೆರಳಿದ್ದಾರೆ. ಬಿಜೆಪಿ, ತನಿಖೆ ಯಾವ ಹಂತದಲ್ಲಿ ನಡೆಯುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಸಾರ್ವಜನಿಕ ವಲಯದಲ್ಲಿ ಮಧ್ಯಂತರ ವರದಿ ಸಲ್ಲಿಸುವಂತೆ ಒತ್ತಾಯ ಕೇಳಿ ಬರುತ್ತಿರುವುದರ ನಡುವೆ ಗೃಹ ಸಚಿವರು ಎಸ್.ಐ.ಟಿ ಮುಖ್ಯಸ್ಥರಿಗೆ ಬುಲಾವ್ ನೀಡಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ವಿಧಾನ ಸಭೆಯಲ್ಲಿ ಇಂದು ಚರ್ಚೆಗೂ ವಿಪಕ್ಷಗಳು ಅವಕಾಶ ಕೇಳಿದ್ದು, ಸಭಾಧ್ಯಕ್ಷ ಯು.ಟಿ ಖಾದರ್ ಕೂಡ ಅವಕಾಶ ನೀಡುವುದಾಗಿ ಇಂದು(ಬುಧವಾರ) ಮಾಧ್ಯಮಗಳಿಗೆ ತಿಳಿಸಿದ್ದರು.
ನಿಯಮ 69ರಡಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆಯ ಚರ್ಚೆಗೆ ಅವಕಾಶವನ್ನು ಸದ್ಯ, ಯು.ಟಿ ಖಾದರ್ ನೀಡಿದ್ದಾರೆ. ಸದನದಲ್ಲಿ ಚರ್ಚೆಯಾಗುವುದಕ್ಕೂ ಮುನ್ನ ಪರಮೇಶ್ವರ್, ಎಸ್.ಐ.ಟಿ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


















