ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಇಂದು(ಶನಿವಾರ, ಆ.23) ಮುಸಕುದಾರಿ ಸಾಕ್ಷಿ ದೂರುದಾರನನ್ನು ಬಂಧಿಸಿದ್ದಾರೆ.
ಧರ್ಮಸ್ಥಳದಲ್ಲಿ ಅನಾಮಿಕ ಮೃತದೇಹ ಹೂತಿರುವುದಾಗಿ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಸಾಕ್ಷಿ ದೂರುದಾರ ಮತ್ತು ಈ ಹಿಂದೆ ಅನಾಥ ಶವಗಳ ಪೋಸ್ಟ್ ಮಾರ್ಟಂ ಮಾಡಿದ್ದ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದು ಅದರಂತೆ ಇಂದು ಮುಸುಕುದಾರಿ ಸಾಕ್ಷಿ ದೂರುದಾರನನ್ನು ಬಂಧಿಸಿದ್ದು ಕೆಲವೇ ಹೊತ್ತಿನಲ್ಲಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ಗ್ರಾಮದ ಸುತ್ತ ನೂರಾರು ಮೃತದೇಹ ಹೂತಿದ್ದೆ ಎಂದು ಹೇಳಿಕೆ ನೀಡಿದ ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಆತ ತೋರಿಸಿದ 17 ಪಾಯಿಂಟ್ ಗಳಲ್ಲೂ ಪರಿಶೀಲನೆ ನಡೆಸಿದಾಗಲೂ ಯಾವುದೇ ಅಸ್ಥಿಪಂಜರದ ಕುರುಹುಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಸಾಕ್ಷಿ ದೂರುದಾರನ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಅದರಂತೆ ಸಾಕ್ಷಿ ದೂರುದಾರ ವ್ಯಕ್ತಿಯನ್ನು ಆ.22 ರಂದು ಬೆಳಗ್ಗೆ 10 ಗಂಟೆಯಿಂದ ಆ.23 ರ ಬೆಳಗ್ಗಿನ ಜಾವ 5 ಗಂಟೆಯವರೆಗೆ ತೀವ್ರ ವಿಚಾರಣೆಯನ್ನು ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಾಡಿದ್ದಾರೆ. ಇದರ ಬೆಳವಣಿಗೆಯಂತೆ ಸಾಕ್ಷಿ ದೂರುದಾರ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.


















