ಧರ್ಮಸ್ಥಳ : ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರ ಕನ್ಯಾಡಿ ಬಳಿ ನೇತ್ರಾವತಿ ನದಿ ಪಕ್ಕದಲ್ಲಿ ಹೊಸ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳಿಗೆ ತೋರಿಸಿದ್ದು, ಅಲ್ಲಿ ನಡೆದ ಶೋಧ ಕಾರ್ಯದಲ್ಲೂ ಮೃತದೇಹದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಈ ಸ್ಥಳ ಇದೆ. ಉಜಿರೆ- ಧರ್ಮಸ್ಥಳ ರಸ್ತೆಯಿಂದ ಸುಮಾರು 1 ಕಿ.ಮೀ ದೂರವನ್ನು ಕಿರಿದಾದ ರಸ್ತೆಯಲ್ಲಿ ಕ್ರಮಿಸಿ ಈ ಜಾಗವನ್ನು ತಲುಪಬೇಕಿದೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿದ್ದರು. ಆತ ತೋರಿಸಿದ ಸ್ಥಳದಲ್ಲಿ ಉತ್ಖನನ ಕಾರ್ಯ ನಡೆಸುವುದಕ್ಕೆ ಯಂತ್ರವನ್ನೂ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಈ ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಸಾಕ್ಷಿ ದೂರುದಾರ ಇದುವರೆಗೆ ಶವಗಳನ್ನು ಹೂತಿರುವುದಾಗಿ ಹೇಳಿ 18 ಸ್ಥಳಗಳನ್ನು ತೋರಿಸಿದ್ದು, ಅವುಗಳಲ್ಲಿ ಶೋಧ ನಡೆಸಿದಾಗ ಎರಡು ಕಡೆ ಮೃತದೇಹದ ಅವಶೇಷ ಪತ್ತೆಯಾಗಿವೆ. ಒಂದು ಕಡೆ (ಸಾಕ್ಷಿ ದೂರುದಾರ ತೋರಿಸಿದ 11ನೇ ಜಾಗಕ್ಕಿಂತ 100 ಮೀ ದೂರದಲ್ಲಿದ್ದ ಜಾಗ) ನೆಲದ ಮೇಲೆಯೇ ಮೃತದೇಹದ ಅವಶೇಷಗಳು ಪತ್ತೆಯಾಗಿತ್ತು. ಒಟ್ಟು 17 ಸ್ಥಳಗಳಲ್ಲಿ ಎಸ್‌ಐಟಿ ಉತ್ಖನನ ಶೋಧ ನಡೆಸಿದೆ.