ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ ಚುರುಕುಗೊಳಿಸಿರುವಂತೆಯೇ 2000 ದಿಂದ 2015ರ ನಡುವೆ ದಾಖಲಾದ ಅಸಹಜ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳನ್ನು(UDR) ಮಾಯವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸಾಕ್ಷಿ ದೂರುದಾರ ಹೇಳಿರುವ ʼಆ ಪ್ರಭಾವಿʼ ವ್ಯಕ್ತಿಯೊಂದಿಗೆ ಮಸಲತ್ತು ನಡೆಸಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿದೆ ಎಂದು ದೂರುದಾರ ಹೇಳಿರುವುದರಿಂದ ಈಗ ದಾಖಲೆಗಳ ನಾಶವಾಗಿದೆ ಎಂಬ ಗಂಭೀರ ವಿಷಯ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಪೊಲೀಸರು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.
ನಿರ್ದಿಷ್ಟವಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ (ಸಿಆರ್‌ಪಿಸಿ) ಸೆಕ್ಷನ್ 174(ಎ) ಅಡಿಯಲ್ಲಿ 15 ವರ್ಷಗಳ ಅವಧಿಯಲ್ಲಿ ದಾಖಲಾದ ಯುಡಿಆರ್ ವಿವರಗಳನ್ನು ಆರ್ ಟಿಐನಡಿ ಕೇಳಲಾಗಿತ್ತು. ಆರ್ ಟಿಐನಡಿ ಕೇಳಲಾದ ದಾಖಲೆಗಳು ಲಭ್ಯವಿಲ್ಲ, ವಿವಿಧ ಸುತ್ತೋಲೆಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಸರ್ಕಾರರ ಜೂನ್ 26, 2013 ರ ಅಧಿಸೂಚನೆ ಮತ್ತು ನವೆಂಬರ್ 23, 2023 ರಂದು ಪೊಲೀಸ್ ಅಧೀಕ್ಷಕರು ಹೊರಡಿಸಿದ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿದ್ದಾರೆ. ಉಳಿದ ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಕಾನೂನು ತಜ್ಞರು ಮತ್ತು ನಾಗರಿಕ ಸಂಘಟನೆಗಳು ಯುಡಿಆರ್ ನಾಶಪಡಿಸಿರುವುದು ಕಾನೂನುಬದ್ಧತೆ ಮತ್ತು ನೈತಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕ್ರಿಮಿನಲ್ ಪ್ರಕರಣದ ದಾಖಲೆಗಳನ್ನು ನಾಶಪಡಿಸಲು ಪೊಲೀಸ್ ಠಾಣೆಗಳಿಗೆ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದಾರೆ. ದಾಖಲೆಗಳನ್ನು ನಾಶ ಮಾಡುವ ಮೊದಲು ಏಕೆ ಡಿಜಿಟಲೀಕರಣ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಅಸಲಿ ಕಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆ ಮೇಲೆದ್ದಿದ್ದು, ಧರ್ಮಸ್ಥಳ, ಬೆಳ್ತಂಗಡಿ ಸುತ್ತಮುತ್ತ ಅಸಹಜ ಸಾವಾಗಿರುವುದರ ಬಗ್ಗೆ ದಾಖಲೆಗಳನ್ನು ಯಾರ ಪ್ರಭಾವದಲ್ಲಿ ನಾಶ ಮಾಡಲಾಗಿದೆ ಎಂಬ ಪ್ರಶ್ನೆಗಳು ಮೇಲೆದ್ದಿವೆ. ಎಸ್.ಐ.ಟಿ ಈ ಮುಖವಾಗಿಯೂ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಎಸ್.ಐ.ಟಿ ಮೂಲಗಳು ಕರ್ನಾಟಕ ನ್ಯೂಸ್ ಬೀಟ್ ಗೆ ತಿಳಿಸಿವೆ.



















