ಬೆಂಗಳೂರು : ಸಾಕ್ಷಿ ದೂರುದಾರ 164 ನೀಡಿದ ಹೇಳಿಕೆಯನ್ನು ಎಸ್.ಐ.ಟಿ ವಿಚಾರಣೆ ನಡೆಸುತ್ತಿದೆ. ಸಾಕ್ಷಿ ದೂರುದಾರ ತೋರಿಸಿದ ಸ್ಥಳಗಳಲ್ಲಿ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ತನಿಖೆ ಮುಂದುವರಿಸಬೇಕೆ, ಬೇಡವೇ ಎನ್ನುವುದನ್ನು ಎಸ್.ಐ.ಟಿ ನಿರ್ಧರಿಸುತ್ತದೆ ಎಂದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರಶ್ನೆಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಿಸಿದ್ದಾರೆ.
ಧರ್ಮಸ್ಥಳ ಪ್ರಕರಣ ಅತ್ಯಂತ ಸೂಕ್ಷ್ಮ. ಹೀಗಾಗಿ ಬಹಳ ಜಾಗೃತೆಯಿಂದ ಸರ್ಕಾರ ತೆಗೆದುಕೊಳ್ಳಬೇಕಾಗುತ್ತದೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ಎಸ್.ಐ.ಟಿಯ ಮುಂದಿನ ತನಿಖೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೇ ಎಸ್.ಐ.ಟಿ ರಚನೆ ಮಾಡಿದೆ. ದೂರಿನ ಆಧಾರದ ಮೇಲೆ ಎಸ್.ಐ.ಟಿ ರಚನೆ ಮಾಡಲಾಗಿದೆ ಎಂದು ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರನೊಬ್ಬ ನೀಡಿರುವ ದೂರಿನ ಆಧಾರದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದುವರೆಗೆ ನಡೆಸಿದ ತನಿಖೆಯ ಬಗ್ಗೆ ಸಚಿವರು ವಿವರಿಸಿದ್ದಾರೆ.
ರಾಜ್ಯ ಸರ್ಕಾರ ರಚನೆ ಮಾಡಿದ ಎಸ್‌ಐಟಿ ತನಿಖೆಯಲ್ಲಿ ಇದುವರೆಗೆ ಒಂದು ಅಸ್ಥಿಪಂಜರ ಮತ್ತೊಂದೆಡೆ ಒಂದಷ್ಟು ಮೂಳೆ ಪತ್ತೆಯಾಗಿವೆ. ಆದರೆ ಇದುವರೆಗೆ ಅದರ ಎಫ್‌ಎಸ್‌ಎಲ್ ವರದಿ ಲಭ್ಯವಾಗಿಲ್ಲ. ಹೀಗಾಗಿ ವರದಿ ಸಿಗುವವರೆಗೆ ಸದ್ಯಕ್ಕೆ ಉತ್ಪನನ ಸ್ಥಗಿತ ಮಾಡಲಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಸದನದಲ್ಲಿ ಸುದೀರ್ಘ ಉತ್ತರ ನೀಡಿದ ಗೃಹ ಸಚಿವರು, ದೂರುದಾರ ತೋರಿಸಿದ ಜಾಗದಲ್ಲಿ ಉತ್ಖನನ ಮಾಡಿದಾಗ ಎರಡು ಜಾಗದಲ್ಲಿ ಅವಶೇಷ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿ ಪಂಜರ ಪತ್ತೆಯಾಗಿತ್ತು, ಮತ್ತೊಂದು ಸ್ಥಳದಲ್ಲಿ ಕೆಲವು ಮೂಳೆಗಳು ಪತ್ತೆಯಾಗಿದ್ದವು. ಅವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಉತ್ಖನನ ಮಾಡಿದ ಇತರ ಜಾಗದಲ್ಲಿ ಕೆಂಪು ಕಲ್ಲಿನ ಕಾರಣದಿಂದ ಮೂಳೆ ಕರಗಿರಬಹುದು ಎಂಬ ಕಾರಣಕ್ಕೆ ಎಲ್ಲಾ ಸ್ಥಳಗಳಲ್ಲಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದಾರೆ. ಅದರ ವಿಶ್ಲೇಷಣೆ ಆಗಬೇಕಿದೆ. ಆಗ ನಿಜವಾದ ತನಿಖೆ ಆರಂಭವಾಗುತ್ತದೆ ಎಂದು ಸದನಕ್ಕೆ ತಿಳಿಸಿದ್ದಾರೆ.
ಸ್ಯಾಂಪಲ್ ಎನಾಲಿಸಿಸ್, ಡಿಎನ್‌ಎ ಸೇರಿ ಹಲವು ವಿಶ್ಲೇಷಣೆ ಆಗಬೇಕಾಗುತ್ತದೆ. ಈಗ ನಡೆದಿದ್ದು ಕೇವಲ ಉತ್ಪನನ ಕಾರ್ಯಾಚರಣೆ ಮಾತ್ರ. ನಿಜವಾದ ತನಿಖೆ ಇನ್ನಷ್ಟೇ ಆರಂಭವಾಗಬೇಕಿದೆ. ದೂರುದಾರ ಮೊದಲು ತಂದ ತಲೆಬುರುಡೆಯ ಅನಾಲಿಸಿಸ್ ಕೂಡಾ ಆಗಬೇಕಿದೆ. ಅದರ ಸಂಪೂರ್ಣ ವರದಿಗೆ ಕಾಯುತ್ತಿದ್ದೇವೆ ಎಂದಿದ್ದಾರೆ.
ಗೃಹ ಸಚಿವರ ಉತ್ತರಕ್ಕೆ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್, ಸುನೀಲ್ ಕುಮಾರ್ ಕಾರ್ಕಳ ಸೇರಿ ಬಿಜೆಪಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.